ಬೆಂಗಳೂರು(ಜು,09): ಶಾಸಕರ ರಾಜೀನಾಮೆಯಿಂದ ರಾಜ್ಯ ರಾಜಕರಣದಲ್ಲಿ ಸಂಚಲನ ಉಂಟಾಗಿದ್ದು, ಇಂದೇ ಮೈತ್ರಿ ಸರ್ಕಾರ ಖಾತಂ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಯಾಕಂದ್ರೆ ಈಗಾಗಲೇ 15 ಮಂದಿ ರಾಜೀನಾಮೆ ನೀಡಿದ್ದಾರೆ. ಆದರೆ ಸೋಮವಾರ ಸ್ಪೀಕರ್ ಇರಲಿಲ್ಲ. ಹೀಗಾಗಿ ಇಂದು ಅವರು ಶಾಸಕರ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಮುಗಿಸ್ತಾರಾ ಅಥವಾ ವಿಳಂಬ ಮಾಡ್ತಾರಾ ಎಂಬ ಕುತೂಹಲ ರಾಜ್ಯದ ಜನರಲ್ಲಿ ಮೂಡಿಸಿದೆ.

ರಾಜೀನಾಮೆ ಕೊಟ್ಟ ಶಾಸಕರನ್ನು ಸ್ಪೀಕರ್ ವಿಚಾರಣೆಗೆ ಕರೀತಾರಾ, ಪ್ರತ್ಯೇಕ ವಿಚಾರಣೆ ಮಾಡುತ್ತಾರೆಯೋ ಅಥವಾ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಅವಕಾಶವೂ ಅವರ ಮುಂದಿದೆಯಾ ಎನ್ನುವ ಪ್ರಶ್ನೆ ಎದ್ದಿದೆ.

ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಸಿದ್ದರಾಮಯ್ಯ ದೂರು ಕೊಟ್ಟಿದ್ದರು. ಆದರೆ ಈವರೆಗೂ ಈ ದೂರಿನ ಬಗ್ಗೆ ಸ್ಪೀಕರ್ ಅವರು ಸೂಕ್ತ ಕ್ರಮ ಕೈಗೊಂಡಿಲ್ಲ. ಈ ದೂರನ್ನು ಈಗ ವಿಚಾರಣೆಗೆ ತೆಗೆದುಕೊಂಡು ರಾಜೀನಾಮೆ ಪ್ರಕ್ರಿಯೆ ವಿಳಂಬ ಮಾಡಬಹುದಾದ ಸಾಧ್ಯತೆಗಳಿವೆ.

ಕಾಂಗ್ರೆಸ್‍ನ ಈಗಿನ ಹೊಸ ದೂರುಗಳ ವಿಚಾರಣೆಯ ನೆಪ ಕೊಡುವ ಮೂಲಕ ಶಾಸಕರನ್ನು ಒಬ್ಬೊಬ್ಬರಾಗಿ ಕರೆಸಿ ರಾಜೀನಾಮೆ ನೀಡಲು ನಿಜ ಕಾರಣದ ಸ್ಪಷ್ಟನೆ ಪಡೆಯ ಸಾಧ್ಯತೆ ಇದೆ. ಅಲ್ಲದೆ ಯಾವುದೇ ಆಮಿಷಕ್ಕೆ ಒಳಗಾಗಿಲ್ಲ ಅಂತ ಖಾತರಿ ಪಡಿಸಿಕೊಳ್ಳುವ ನೆಪ ಹಾಗೂ ಶಾಸಕರ ಕ್ಷೇತ್ರಗಳಿಂದ ಸಂಘಟನೆಗಳು ಹಾಗೂ ಸಾರ್ವಜನಿಕರನ್ನು ಕರೆಸಿ ಅಭಿಪ್ರಾಯ ಸಂಗ್ರಹಿಸುವ ನೆಪವನ್ನೂ ನೀಡಬಹುದು.

ವಿಳಂಬ ಧೋರಣೆ ಅನುಸರಿಸಿದರೂ ರಾಜೀನಾಮೆಯು ನಿಯಮ ಬದ್ಧವಾಗಿದ್ದರೆ ಅಂಗೀಕರಿಸ್ತಾರಾ ಅಥವಾ ಇಲ್ಲವೆ ಎಂಬುದನ್ನು ಕಾದುನೋಡಬೇಕು. ಒಟ್ಟಿನಲ್ಲಿ ಇಂದಿನ ಸ್ಪೀಕರ್ ನಡೆ ಭಾರೀ ಕುತೂಹಲ ಹುಟ್ಟಿಸಿದೆ.