ನವದೆಹಲಿ(ಫೆ.18): ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ 44 ಸಿಆರ್‍ಪಿಎಫ್ ಯೋಧರು ಬಲಿಯಾದ ಬೆನ್ನಲ್ಲೆ ಭಾರತ ಮತ್ತು ಪಾಕ್ ನಡುವೇ ಮತ್ತೇ ಉದ್ವಿಗ್ನತೆ ಉಂಟಾಗುವ ಪರಿಸ್ಥಿತಿ ಎದುರಾಗಿತ್ತು. ಭಾರತ ಸೇನಾ ಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್‍ಗೆ ಪಾಕ್ ವಿಧಿಸಿದ್ದ ಗಲ್ಲುಶಿಕ್ಷೆ ಕುರಿತಾದ ಪ್ರಕರಣದ ವಿಚಾರಣೆ ಸೋಮವಾರ ಅಂತರಾಷ್ಟ್ರೀಯ ನ್ಯಾಯಲಯದಲ್ಲಿ ನಡೆಯಿತು.

ವಿಚಾರಣೆ ಆರಂಭವಾಗುವುದಕ್ಕೂ ಮುನ್ನ ಪಾಕಿಸ್ತಾನ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಖಾನ್ ಭಾರತದ ಜಂಟಿ ಕಾರ್ಯದರ್ಶಿ ದೀಪಕ್ ಮಿತ್ತಲ್ ಅವರಿಗೆ ಹಸ್ತಲಾಘವ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಿತ್ತಲ್ ನಮಸ್ತೆ ಎನ್ನುವ ಮೂಲಕ ಹಸ್ತಲಾಘವ ನಿರಾಕರಿಸಿದ್ದಾರೆ. ನಂತರ ಖಾನ್ ನೆದರ್‍ಲ್ಯಾಂಡ್‍ನಲ್ಲಿನ ಭಾರತದ ರಾಯಭಾರಿ ವೇಣು ರಾಜಮೋನಿಯತ್ತ ಕೈ ಚಾಚಿದ್ದಾರೆ. ವೇಣು ಸಹ ನಮಸ್ತೆ ಎನ್ನುತ್ತಾ ಹಸ್ತಲಾಘವ ತಿರಸ್ಕರಿಸಿದ್ದಾರೆ. ಇದರಿಂದ ಮನ್ಸೂರ್ ಖಾನ್ ಭಾರೀ ಮುಜುಗರಕ್ಕೆ ಒಳಗಾದರು ಎನ್ನಲಾಗಿದೆ.

ಅಂತರಾಷ್ಟ್ರೀಯ ಕೋರ್ಟ್‍ನಲ್ಲಿ ಕುಲಭೂಷಣ್ ಜಾಧವ್‍ಗೆ ಪಾಕ್ ಸೇನಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಬಗೆಗಿನ ಪ್ರಕರಣದ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಪಾಕ್ ಅಂತರಾಷ್ಟ್ರೀಯ ಕಾನೂನು ಮತ್ತು ಸಂಪ್ರದಾಯದ ಉಲ್ಲಂಘನೆ ಮಾಡಿದೆ. ಭಾರತದ ನೌಕಾ ಪಡೆ ಮಾಜಿ ಅಧಿಕಾರಿ ಜಾಧವ್ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ. ಇದು ಭಾರತದ ವಿರುದ್ಧ ಪಾಕ್ ರೂಪಿಸುತ್ತಿರವ ಷಡ್ಯಂತ್ರ ಎಂದು ಹರೀಶ್ ಸಾಳ್ವೆ ವಾದ ಮಂಡಿಸಿದ್ದಾರೆ.

ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬೇಹುಗಾರಿಕೆ ಮತ್ತು ಉಗ್ರ ಚಟುವಟಿಕೆ ಆರೋಪದಲ್ಲಿ ಪಾಕ್ ಬಂಧಿಸಿತ್ತು. ಜಾಧವ್‍ಗೆ ಮರಣ ದಂಡನೆಯನ್ನು ವಿಧಿಸಲಾಗಿತ್ತು. ಸದ್ಯ ಈ ತೀರ್ಪನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಲಯದ ಮೊರೆ ಹೋಗಿದೆ.