ಮೆಲ್ಬೋರ್ನ್(ಜ:18): ಆಸೀಸ್ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ.ಸ್ಪಿನ್ ಮಾಂತ್ರಿಕ ಚಾಹಲ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ಆಸೀಸ್ ಪಡೆ ಕೇವಲ 230 ರನ್ ಗಳಿಸುವಲ್ಲಿ ಶಕ್ತವಾಯಿತು.

ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬೌಲಿಂಗ್ ಆಯ್ದುಕೊಂಡರು,ಇದಕ್ಕೆ ಪ್ರತಿಯಾಗಿ ಆರಂಭದಲ್ಲೇ ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ಅವರ ದಾಳಿಗೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ ಮನ್ ಗಳು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ವಿಫಲರಾದರು.

ನಂತರ ಬಂದ ಕ್ವಾಜಾ ಮತ್ತು ಶಾನ್ ಮಾರ್ಷ್ ತಾಳ್ಮೆಯ ಆಟವಾಡಿ ತಂಡವನ್ನು ಆಪತ್ತಿನಿಂದ ಪಾರುಮಾಡಲು ಯತ್ನಿಸಿದರು,ಆದರೆ ಚಾಹಲ್ ಚಮತ್ಕಾರಿ ಬೌಲಿಂಗ್ ದಾಳಿಗೆ ಆಸೀಸ್ ಆಟಗಾರರು ಒಬ್ಬೊಬ್ಬರಾಗಿಯೇ ಪೆವಿಲಿಯನ್ ಹಾದಿ ಹಿಡಿದರು.48.4 ಓವರ್ ಗಳಲ್ಲೇ ಆಸೀಸ್ 230 ರನ್ ಗೆ ಆಲೌಟ್ ಆಯಿತು.

ನಂತರ ಕ್ರೀಸ್ ಗೆ ಇಳಿದ ಭಾರತದ ಆಟಗಾರರು ಆರಂಭದಲ್ಲಿ ರೋಹಿತ್ ಶರ್ಮ9 ರನ್ ಗೆ ವಿಕೆಟ್ ಒಪ್ಪಿಸಿದರೆ ಶಿಖರ್ ಧವನ್ 23 ರನ್ ಗೆ ಪೆವಿಲಿಯನ್ ಹಾದಿ ಹಿಡಿದರು,ನಂತರ ಬಂದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ತಾಳ್ಮೆಯ ಆಟವಾಡಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು.

ಉತ್ತಮ ಪ್ರದರ್ಶನ ನೀಡುತ್ತಿದ್ದ ನಾಯಕ ಕೊಹ್ಲಿ 46 ರನ್ ಗೆ ವಿಕೆಟ್ ಒಪ್ಪಿಸಿದರು,ನಂತರ ಬಂದ ಕೇದಾರ್ ಜಾದವ್ ಉತ್ತಮ ಪ್ರದರ್ಶನ ನೀಡಿ 61 ರನ್ ಗಳಿಸಿದರೆ,ಮಹೇಂದ್ರಸಿಂಗ್ ಧೋನಿ 87 ರನ್ ಗಳಿಸಿ 121 ರನ್ ಗಳ ಜೊತೆಯಾಟದೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದರೊಂದಿಗೆ ಭಾರತ 2-1 ಅಂತರದಿಂದ ಆಸೀಸ್ ವಿರುದ್ಧ ಏಕದಿನ ಸರಣಿ ಜಯ ಸಾಧಿಸಿತು.