ಸಿಡ್ನಿ(ಜ.07): ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ, ಇದೇ ಮೊದಲ ಬಾರಿಗೆ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆಡಿದ ಭಾರತ 7 ವಿಕೆಟ್ ನಷ್ಟಕ್ಕೆ 622 ರನ್‍ಗಳಿಸಿ, ಡಿಕ್ಲೇರ್ ಘೋಷಿಸಿಕೊಂಡಿತ್ತು. ತಂಡದ ಪರ ಮಯಾಂಕ್ ಅಗರ್‍ವಾಲ್(77), ಚೇತೇಶ್ವರ ಪೂಜಾರ(193) ಹನುಮ ವಿಹಾರಿ(42), ರಿಷಭ್ ಪಂತ್(159*) ಹಾಗೂ ರವೀಂದ್ರ ಜಡೇಜಾ(81) ಉತ್ತಮ ಆಟ ಪ್ರದರ್ಶನ ನೀಡಿದ್ದರು.

2-1ರ ಅಂತರದಲ್ಲಿ ಟೀಂ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. 71 ವರ್ಷಗಳ ಬಳಿಕ ಟೀಂ ಇಂಡಿಯಾ ಆಸೀಸ್ ಟೆಸ್ಟ್ ಸರಣಿಯನ್ನು ಗೆದ್ದು ದಾಖಲೆಯನ್ನು ಬರೆದಿದೆ. ಟೀಂ ಇಂಡಿಯಾ ಸರಣಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ವಿರಾಟ್ ಕೋಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆಲುವು ಕಂಡಿದ್ದು, ದೇಶಾದ್ಯಂತ ಜನರು ಕ್ರಿಕೆಟ್ ತಂಡಕ್ಕೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಟೀಂ ಇಂಡಿಯಾ ಪರ ಕುಲದೀಪ್ ಯಾದವ್ 5 ವಿಕೆಟ್ ಪಡೆದು ಮಿಂಚಿದರೆ, ಮಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಉಳಿದಂತೆ ಜಸ್ಪ್ರೀತ್ ಬೂಮ್ರಾ ಒಂದು ವಿಕೆಟ್‍ಗೆ ತೃಪ್ತಿಪಟ್ಟರು.

ಇನ್ನು ಐದನೇ ದಿನದಾಟಕ್ಕೆ ವರುಣ ಅಡ್ಡಿಯಾದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಗುವ ಮೂಲಕ ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು ಲಭಿಸಿತು.