ನವದೆಹಲಿ(ಫೆ.18): ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಭೀಕರ ದಾಳಿ ಬೆನ್ನಲ್ಲೇ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದೆ. ಭಾರತದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಅಂತಾರಾಷ್ಟ್ರೀಯ ಕೋರ್ಟ್‍ನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸುತ್ತಿದ್ದು, ಪಾಕಿಸ್ತಾನ ಜಾಧವ್‍ಗೆ ನೀಡಿರುವ ಗಲ್ಲು ಶಿಕ್ಷೆ ಬಗ್ಗೆ ಕೆಲವೇ ಕ್ಷಣಗಳಲ್ಲಿ ಮಹತ್ವದ ತೀರ್ಪು ಹೊರಬೀಳಲಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾದವ್ ಪ್ರಕರಣದ ವಿಚಾರಣೆ ಶುರುವಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿರುವ ಆರೋಪದ ಮೇಲೆ ಅಲ್ಲಿನ ಕೋರ್ಟ್ ಜಾಧವ್‍ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ನ್ಯಾಯಾಲಯದಲ್ಲಿ ಭಾರತದ ಪರವಾಗಿ ಹರೀಶ್ ಸಾಳ್ವೆ ನೇತೃತ್ವದ ವಕೀಲರ ತಂಡ ವಾದ ಮಂಡಿಸುತ್ತಿದೆ. ಪಾಕಿಸ್ತಾನ ವಿಯೆನ್ನಾ ಒಪ್ಪಂದದವನ್ನು ಉಲ್ಲಂಘನೆ ಮಾಡಿದೆ. ಕುಲಭೂಷಣ್ ಜಾಧವ್ ಓರ್ವ ಅಮಾಯಕ ಎಂದು ಭಾರತದ ಜಂಟಿ ಕಾರ್ಯದರ್ಶಿ ದೀಪಕ್ ಮಿತ್ತಲ್ ವಾದ ಮಂಡಿಸಿದ್ದಾರೆ.

ಪಾಕಿಸ್ತಾನ ಮುಗ್ಧ ಭಾರತೀಯನಿಗೆ ಗಲ್ಲುಶಿಕ್ಷೆ ನೀಡುತ್ತಿದೆ. ಮುಗ್ಧನ ಜೀವ ಸಂಕಷ್ಟದಲ್ಲಿರುವುದು ದುರದೃಷ್ಟಕರ ಎಂದು ಪ್ರಕರಣದ ಅಂತಿಮ ವಿಚಾರಣೆ ವೇಳೆ ಭಾರತ ಪರ ವಕೀಲ ಹರೀಶ್ ಸಾಳ್ವೆ ವಾದಿಸಿದ್ದಾರೆ.

ಈ ಹಿಂದೆಯೇ ಪಾಕಿಸ್ತಾನ ತನ್ನ ದೇಶದಲ್ಲಿನ ಭಯೋತ್ಪಾದನೆ ಚಟುವಟಿಕೆಗಳಿಗೆ ಕುಲಭೂಷಣ್ ಜಾಧವ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ಜಾಧವ್‍ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ವಿರೋಧಿಸಿ ಭಾರತ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮೊರೆ ಹೋಗಬೇಕಾಯಿತು. ಇದೀಗ ಭಾರತ ಸರ್ಕಾರ ಮನವಿ ಮೇರೆಗೆ ಕುಲಭೂಷಣ್ ಜಾಧವ್ ಅವರ ಪ್ರಕರಣದ ವಿಚಾರಣೆಯನ್ನು ಅಂತಾರಾಷ್ಟ್ರೀಯ ಕೋರ್ಟ್ ಇಂದು ನಡೆಸುತ್ತಿದೆ.