ಬೆಂಗಳೂರು:(ಫೆ23): ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಕೋ. ಚೆನ್ನಬಸಪ್ಪನವರು ಇಂದು ನಮ್ಮನೆಲ್ಲ ಅಗಲಿದ್ದಾರೆ. ಇವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಸಮೀಪದಲ್ಲಿರುವ ಆಲೂರು ಗ್ರಾಮದಲ್ಲಿ 1922 ಫೆ 21 ರಂದು ಜನಿಸಿದ್ದು, ಇವರ ತಂದೆ ಕೋಣನ ವೀರಣ್ಣ, ತಾಯಿ ಬಸಮ್ಮ ಅವರ ಮಗನಾಗಿದ್ದಾರೆ.

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಬಂಧನಕ್ಕೊಳಗಾಗಿ ಸೆರೆಮನೆ ವಾಸವನ್ನು ಅನುಭವಿಸಿದ್ದರು, ಇವರು ಬರೆದಿರುವ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇವರ ಕೃತಿಗಳು ಖಜಾನೆ, ರಕ್ತತರ್ಪಣ, ನ್ಯಾಯಾಲಯದ ಸತ್ಯ ಕಥೆಗಳು, ಹೃದಯ ನೈವೇದ್ಯ, ಆ ಮುಖ ಈ ಮುಖ, ನನ್ನ ಮನಸ್ಸು, ನನ್ನ ನಂಬುಗೆ, ಇನ್ನೂ ಅನೇಕ ಕೃತಿಗಳನ್ನು ಬರೆದಿದ್ದಾರೆ. ಕವನ ಸಂಕಲನಗಳು, ಪ್ರಾಣಪಕ್ಷಿ, ಜೀವತೀರ್ಥ, ಸ್ವಾತಂತ್ರ್ಯ ಮಹೋತ್ಸವ. ಕಥಾ ಸಂಕಲನಗಳು, ನಮ್ಮೂರ ದೀಪ, ಗಡಿಪಾರು, ಗಾಯಕನಿಲ್ಲದ ಸಂಗೀತ. ಹೀಗೆ ಇವರು ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ನ್ಯಾಯ ಮೂರ್ತಿಗಳಾಗಿ ವೃತ್ತಿ ಆರಂಭಿಸಿದ ಇವರು ನ್ಯಾಯಧೀಶರಾಗಿ ಕಾರ್ಯನಿರ್ವಹಿಸುವುದರ ಮೂಲಕ ನಿವೃತ್ತಿ ಹೊಂದಿದ್ದರು.

ಈಗ ಇವರ ಅಗಲಿಕೆಗೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ” ಕರ್ನಾಟಕ ಏಕೀಕರಣದ ಹೋರಾಟಗಾರರಾದ, ಕನ್ನಡ ಪ್ರಜೆಗಳನ್ನು ಉಸಿರಾಗಿಸಿಕೊಂಡ ಹಿರಿಯ ಜೀವ, ಕುವೆಂಪು ಅವರ ಪರಮಾಪ್ತ ಶಿಷ್ಯ, ವೈಯಕ್ತಿಕವಾಗಿ ಸದಾ ನನಗೆ ಮಾರ್ಗದರ್ಶನ ನೀಡುತ್ತಿದ್ದ ಹಿತೈಷಿ ಕೋ. ಚನ್ನಬಸಪ್ಪನವರ ಅಗಲಿಕೆಯ ಸುದ್ದಿ ಅಘಾತವನ್ನುಂಟು ಮಾಡಿದೆ. ಆ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಎಂದು ಟ್ವೀಟ್ ಮಾಡಿದ್ದಾರೆ.