ನವದೆಹಲಿ(ಫೆ.೧೯): ಜಮ್ಮ-ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರನ್ನು ಹತ್ಯೆಗೈದ ಪಾಕ್ ಮೂಲದ ಜೈಷೆ ಮೊಹ್ಮದ್ ಉಗ್ರ ಸಂಘಟನೆ ವಿರುದ್ಧ ಇಡೀ ವಿಶ್ವವೇ ಕಿಡಿಕಾರುತ್ತಿದ್ದು, ಬಾಂಬ್ ದಾಳಿ ಹಿಂದಿನ ಮಾಸ್ಟರ್ ಮೈಂಡ್ ಮಸೂದ್ ಅಜರ್‌ನನ್ನು ಜಾಗತೀಕ ಭಯೋತ್ಪಾದಕ ಎಂದು ಘೋಷಿಸಲು ಫ್ರಾನ್ಸ್ ಚಿಂತನೆ ನಡೆಸಿದೆ.

ಫ್ರಾನ್ಸ್ ಶೀಘ್ರದಲ್ಲಿಯೇ ವಿಶ್ವಸಂಸ್ಥೆ ಮುಂದೆ ಈ ಪ್ರಸ್ತಾಪ ಇಡಲಿದ್ದು, ಮಸೂದ್‌ನನ್ನು ಕುಖ್ಯಾತ ಜಾಗತೀಕ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂದು ಮನವಿ ಮಾಡಲಿದೆ ಎನ್ನಲಾಗಿದೆ.

ಈ ಹಿಂದೆಯೇ ಮಸೂದ್‌ನನ್ನು ಜಾಗತೀಕ ಭಯೋತ್ಪಾದಕ ಎಂದು ಘೋಷಿಸಿ ಯಾವುದೇ ದೇಶಕ್ಕೂ ಪ್ರವೇಶಿಸದಂತೇ ಬಹಿಷ್ಕಾರ ಹಾಕಿ ಎಂದು ತಾಕೀತು ಮಾಡಿತ್ತು. ಆದರೆ, ಚೀನಾ ಈ ಪ್ರಸ್ತಾಪವನ್ನು ತಳ್ಳಿ ಹಾಕಿತ್ತು. ಇದೀಗ ಮತ್ತೆ ಫ್ರಾನ್ಸ್ ಈ ಪ್ರಸ್ತಾಪ ಇಡಲಿದ್ದು, ಶೀಘ್ರದಲ್ಲಿಯೇ ಜಾಗತೀಕ ಭಯೋತ್ಪಾದಕರ ಪಟ್ಟಿಗೆ ಮಸೂದ್‌ನನ್ನು ಸೇರಿಸುವ ಸಾಧ್ಯತೆಯಿದೆ ಎಂದು ಫ್ರಾನ್ಸ್ ಮೂಲದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಈಗಾಗಲೇ ಪುಲ್ವಾಮ ಮೇಲಿನ ದಾಳಿಯನ್ನು ಜಗತ್ತಿನ ಹಲವು ದೇಶಗಳು ಕಟುವಾಗಿ ಖಂಡಿಸಿವೆ. ಅಮೆರಿಕ, ರಷ್ಯಾ, ಭೂತಾನ್, ನೇಪಾಳ, ಶ್ರೀಲಂಕಾ ಈ ದಾಳಿಯನ್ನು ಬಲವಾಗಿ ಖಂಡಿಸಿವೆ.

ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ’ ಎಂದು ರಷ್ಯಾ ಒಕ್ಕೂಟ ಘೋಷಿಸಿದರೇ, ಇನ್ನೊಂದೆಡೆ ‘ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಉಗ್ರರ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಬಲಿದಾನ ಮಾಡಿದ ಯೋಧರ ಕುಟುಂಬಗಳಿಗೆ ನಮ್ಮ ಸಾಂತ್ವನಗಳು. ಭಯೋತ್ಪಾದನೆಯನ್ನು ಕಿತ್ತೊಗೆಯುವ ಹೋರಾಟದಲ್ಲಿ ಭಾರತದ ಜತೆಗೆ ನಾವು ನಿಲ್ಲುತ್ತೇವೆ ಅಮೆರಿಕ ಹೇಳಿದೆ.