ನವದೆಹಲಿ(ಜೂನ್.18) ದೆಹಲಿಯ ಸಂಸತ್ತಿನ ಅಧಿವೇಶದಲ್ಲಿ ಭಾಗಿಯಾಗಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ರೈತರ ಸಮಸ್ಯೆಗಳ ಬಗ್ಗೆ, ಕಾವೇರಿ ವಿಚಾರದಲ್ಲಿನ ಹೇಳಿಕೆಯ ವಿಚಾರದ ಬಗ್ಗೆ ಸುದ್ದಿಗೊಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

ನಾನು ಕಾವೇರಿ ನದಿ ನೀರು ಹಂಚಿಕೆಯಲ್ಲಿ ಎಂಪಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿಲ್ಲ. ನಿನ್ನೆ ನೀಡಿದ ಹೇಳಿಕೆಯನ್ನು ತಿರುಚಲಾಗಿದೆ. ಬೇಜವಾಬ್ದಾರಿತನದ ಸ್ವಭಾವ ನನ್ನದಲ್ಲ. ನನ್ನ ಸ್ವಭಾವದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬೇರೆ ಬೇರೆ ರೀತಿ ಮಾಡಲಾಗುತ್ತಿದೆ.

ನಾನು ಮಾತು ಬದಲಿಸುವ ರಾಜಕಾರಣಿ ಅಲ್ಲ. ಜನರ ಹಿತಕಾಯುವುದಕ್ಕಾಗಿ ಅಂಬರೀಶ್ ಮೇಲೆ ಆಣೆ ಮಾಡಿ ಹೇಳಿದ್ದೆ, ಈಗಲೂ ನನ್ನ ಮಾತಿಗೆ ನಾನು ಬದ್ಧ. ಮಾತು ಬದಲಿಸುವ ಹತ್ತಾರು ರಾಜಕಾರಣಿಗಳನ್ನು ನೀವು ನೋಡಿರಬಹುದು ಅಂತಹ ರಾಜಕಾರಣಿಗಳ ಸಾಲಿಗೆ ನನ್ನನ್ನು ಸೇರಿಸಬೇಡಿ. ಜನರು ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಕಾವೇರಿ ವಿಚಾರದಲ್ಲಿ ನಾನು ಉಲ್ಟಾ ಹೊಡೆದಿಲ್ಲ. ಕೆಲವರು ಒಂದೊಂದು ದಿನಕ್ಕೆ ಒಂದೊಂದು ಮಾತು ಬದಲಿಸುತ್ತಾರೆ. ಎಂಪಿಯಾಗಿ ನನಗೆ ಹೆಚ್ಚಿನ ಜವಾಬ್ದಾರಿ ಇದೆ. ಅಂಬರೀಶ್ ಹಾದಿಯಲ್ಲಿಯೇ ನಾನು ಕೊನೆಯವರೆಗೂ ಇರುತ್ತೇನೆ.

ಮಂಡ್ಯ ಜನರ ಬಗ್ಗೆ ನನಗೆ ಕಾಳಜಿ ಇದೆ. ಕಾವೇರಿ ವಿಚಾರವಾಗಿ ಎಲ್ಲರ ಜೊತೆ ಚರ್ಚೆ ನಡೆಸುತ್ತಿದ್ದೇನೆ. ನಾನು ಕಾವೇರಿ ವಿಚಾರದ ಬಗ್ಗೆ ಮೂರ್ಖತನದ ಹೇಳಿಕೆ ನೀಡಿಲ್ಲ ಎಂದು ಹೇಳಿದರು.

ಮಂಡ್ಯ ರೈತ ಸುರೇಶ್ ಆತ್ಮಹತ್ಯೆ ವಿಷಯ ತಡವಾಗಿ ತಿಳಿಯಿತು. ರೈತ ಸುರೇಶ್ ಆತ್ಮಹತ್ಯೆ ವಿಷಯ ತಿಳಿದು ಮನಸ್ಸಿಗೆ ತುಂಬಾ ನೋವಾಯಿತು. ಇನ್ನು ಮುಂದೆ ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಧೈರ್ಯ ತುಂಬಬೇಕು ಎಂದು ನುಡಿದರು.