ನವದೆಹಲಿ(ಫೆ.28): ಪಾಕಿಸ್ತಾನದ ಸೇನಾವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಸುರಕ್ಷಿತವಾಗಿ ತಕ್ಷಣಕ್ಕೆ ಬಿಡುಗಡೆಮಾಡಬೇಕು ಎಂದು ಭಾರತ ಆಗ್ರಹಿಸಿದೆ.

ಭಾರತದ ದಾಳಿಗೆ ಪ್ರತಿಯಾಗಿ ಬುಧವಾರ ಬೆಳಗ್ಗೆ ಪಾಕಿಸ್ತಾನ ದಾಳಿ ನಡೆಸಿತ್ತು. ಮಿಗ್-21ವ ಜೆಟ್ ವಿಮಾನ ಪತನವಾಗಿದ್ದು, ಓರ್ವ ಪೈಲಟ್ ಕಣ್ಮರೆಯಾಗಿದ್ದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿತು. ಆ ಕಣ್ಮರೆಯಾದ ಪೈಲಟ್ ನಮ್ಮ ವಶದಲ್ಲಿದ್ದಾನೆ ಎಂದು ಪಾಕಿಸ್ತಾನ ತಿಳಿಸಿತು.

ಈ ಬೆಳವಣಿಗೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೂರು ರಕ್ಷಣಾ ಪಡೆ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್‍ದವೋಲ್, ವಿದೇಶಾಂಗ ಹಾಗೂ ರಕ್ಷಣಾ ಕಾರ್ಯದರ್ಶಿ ಮತ್ತು ಗುಪ್ತಚಾರ ಇಲಾಖೆ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು.

ಇನ್ನು ವಿಂಗ್ ಕಮಾಂಡರ್ ಮೇಲೆ ಅಲ್ಲಿನ ಜನ ಹಲ್ಲೆ ನಡೆಸಿರುವುದನ್ನು ಖಂಡಿಸಿದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನು ನಿಯಮಾವಳಿಗಳನ್ನು ಮೀರಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದಿದೆ. ಆದರೆ ಪಾಕ್ ಮಾತ್ರ ಸೆರೆಸಿಕ್ಕಿರುವ ವಿಂಗ್ ಕಮಾಂಡರ್ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಅವರನ್ನು ಗೌರವದಿಂದ ನೋಡಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ,

ಐಎಎಫ್ ಪೈಲಟ್ ಅವರನ್ನು ಸೆರೆಹಿಡಿದಿರುವ ಪಾಕಿಸ್ತಾನದ ಕೃತ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.