ಮುಂಬೈ(ಫೆ.28): ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಪಾಕಿಸ್ತಾನ ಸೇನೆಯ ವಶದಲ್ಲಿದ್ದಾರೆ. ದೇಶಾದ್ಯಂತ ಸಾವಿರಾರು ಜನರು ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗುವಂತೆ ಪ್ರಾರ್ಥಿಸುತ್ತಿದ್ದಾರೆ. ಎಲ್ಲಾ ಭಾರತೀಯ ಜನತೆಯ ಪ್ರೀತಿ ಮತ್ತು ಕಾಳಜಿಗಿ ಧನ್ಯವಾದ ಎಂದು ಅಭಿನಂದನ್ ತಂದೆ ಸಂದೇಶ ರವಾನಿಸಿದ್ದಾರೆ.

ನನ್ನ ಮಗ ಒಬ್ಬ ಯೋಧ. ಆತನ ಬಗ್ಗೆ ನನಗೆ ಹೆಮ್ಮೆಯಿದ್ದು, ಆತ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗುವಂತೆ ಪ್ರಾರ್ಥಿಸುತ್ತಿದ್ದೇನೆ. ಅಲ್ಲದೇ ಭಾರತೀಯರು ಕೂಡ ಮಗ ವಾಪಸ್ ಬರುವಂತೆ ಪ್ರಾರ್ಥಿಸುತ್ತಿರುವುದಕ್ಕೆ ಧನ್ಯವಾದ ಎಂದಿದ್ದಾರೆ.

ಪಾಕಿಸ್ತಾನ ಬಿಡುಗಡೆ ಮಾಡಿರುವ ವಿಡಿಯೋ ನೋಡಿದೆ. ಅಭಿನಂದನ್ ಜೀವಂತವಾಗಿದ್ದು, ಸೇನೆ ಕೇಳುತ್ತಿರುವ ಪ್ರಶ್ನೆಗಳಿಗೆಲ್ಲ ಧೈರ್ಯವಾಗಿ ಉತ್ತರಿಸುತ್ತಿದ್ದಾನೆ. ದೇವರ ಕೃಪೆ ಆತನ ಮೇಲಿದೆ. ಆತನ ಸುರಕ್ಷಿತವಾಗಿ ಬಿಡುಗಡೆಯಾಗುವಂತೆ ನೀವೆಲ್ಲ ಪ್ರಾರ್ಥಿಸುತ್ತಿದ್ದೀರಾ. ಆತನಿಗೆ ಅಲ್ಲಿ ಯಾವುದೇ ತೊಂದರೆಯಾಗದಿರಲಿ ಹಾಗೂ ಸುರಕ್ಷಿತವಾಗಿ ಮರಳಲಿ ಎಂದು ನಾನು ಕೂಡ ಪ್ರಾರ್ಥಿಸುತ್ತೇನೆ. ಈ ಸಮಯದಲ್ಲಿ ನಮ್ಮ ಜೊತೆ ನೀವೆಲ್ಲ ಕೈ ಜೋಡಿಸಿರುವುದಕ್ಕೆ ಧನ್ಯವಾದಗಳು ಎಂದಿದ್ದಾರೆ.

ಭಾರತದ ದಾಳಿಗೆ ಪ್ರತಿಯಾಗಿ ಬುಧವಾರ ಬೆಳಗ್ಗೆ ಪಾಕಿಸ್ತಾನ ದಾಳಿ ನಡೆಸಿತ್ತು. ಆ ವೇಳೆ ಪಾಕ್ ನೆಲದಲ್ಲಿ ಮಿಗ್ 21 ನೆಲಕ್ಕುರುಳಿದೆ. ಈ ವೇಳೆ ಅಭಿನಂದನ್ ಪ್ಯಾರಾಚೂಟ್ ನಿಂದ ಜಿಗಿದು ನೆಲಕ್ಕೆ ಬಿದ್ದಿದ್ದಾರೆ. ತಮ್ಮ ನೆಲದಲ್ಲಿ ಅಭಿನಂದನ್ ಇರುವುದನ್ನು ಗಮನಿಸಿದ ಸ್ಥಳಿಯರು ಪಾಕಿಸ್ತಾನ ಸೇನೆಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪಾಕ್ ಸೈನಿಕರು ಅಭಿನಂದನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೂಲತಃ ತಮಿಳುನಾಡಿನವರಾದ ಅಭಿನಂದನ್ ಅವರಿಗೆ ಮಿಗ್ 21ನಲ್ಲೇ 3000 ಗಂಟೆ ಹಾರಾಟ ನಡೆಸಿರುವ ಅನುಭವವಿದೆ. ಇವರ ತಂದೆ ಎಸ್. ವರ್ಥಮಾನ್ ಸಹ ನಿವೃತ್ತ ಮಾರ್ಷಲ್ ಆಗಿದ್ದಾರೆ.