ಬೆಂಗಳೂರು(ಏ.04): ಸಿನಿಮಾದಂತೆ ರಾಜಕೀಯ ಸಹ ಆಕಸ್ಮಿಕ ಎಂಟ್ರಿ. ಇಂದು ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಇಂದು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸುಮಲತಾ, ನಾನು ರಾಜಕೀಯಕ್ಕಾಗಿ ಮಂಡ್ಯಕ್ಕೆ ಬರಲಿಲ್ಲ, ಮಂಡ್ಯಕ್ಕೆ ಬರಬೇಕು ಅಂತ ರಾಜಕೀಯಕ್ಕೆ ಬಂದೆ. ಅಂಬಿ ಇಲ್ಲ ಅಂದಾಗಲೂ ಮಂಡ್ಯ ಜನರು ಅದೇ ರೀತಿಯ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಹೆಚ್ಚು ಜನರನ್ನು ಭೇಟಿಯಾದಷ್ಟು ನಮ್ಮ ಮೇಲಿನ ಭಾವಾನಾತ್ಮಕ ಸಂಬಂಧ ಹೆಚ್ಚುತ್ತಿದೆ ಎಂದು ಹೇಳಿದರು.

ಸಾಧನೆಗಳು ನಮ್ಮ ಬಗ್ಗೆ ಮಾತಾಡಬೇಕೇ ಹೊರತು ನಾವು ಸಾಧನೆಗಳ ಬಗ್ಗೆ ಮಾತಾಡಬಾರದು ಎಂದು ಅಂಬರೀಷ್ ಹೇಳುತ್ತಿದ್ದರು. ಅವರು ಸಾವಿರ ಒಳ್ಳೆಯ ಕೆಲಸ ಮಾಡಿದ್ರು. ಆದ್ರೆ ಎಲ್ಲೂ ಹೇಳ್ಕೊಂಡಿರಲಿಲ್ಲ. ಕುಮಾರಸ್ವಾಮಿ ಪ್ರಚಾರದ ವೇಳೆ ಯಾವುದೋ ಹುಡುಗಿಯನ್ನು ತೋರಿಸಿ ನಾನು ಸಹಾಯ ಮಾಡಿದೆ ಅಂತ ಹೇಳ್ಕೊತಿದ್ರು ಎಂದು ವ್ಯಂಗ್ಯವಾಡಿದ್ದಾರೆ

ಮಂಡ್ಯ ಜನರ ಪ್ರೀತಿ ಅಭಿಮಾನ ನನಗೆ ಹೆಚ್ಚಿನ ವಿಶ್ವಾಸ ತುಂಬಿದೆ. ಅಂಬಿ ವಸತಿ ಸಚಿವರಾಗಿದ್ದಾಗ ಒಂದಷ್ಟು ಕೆಲಸ ಮಾಡಿದ್ದರು. ಇನ್ನೂ ಸಾಕಷ್ಟು ಕನಸು ಕಂಡಿದ್ದರು.
ಅದನ್ನು ನನಸು ಮಾಡುವತ್ತ ನನ್ನ ಹೆಜ್ಜೆ ಸಾಗಿದೆ. ಹಾಗಂತ ಗೆದ್ದ ತಕ್ಷಣ ಸಿಂಗಾಪುರ್ ಮಾಡಿಬಿಡ್ತೇನೆ ಅಂತಲ್ಲ. ಆದರೆ ಅಭಿವೃದ್ಧಿಗೆ ಏನೇನೆಲ್ಲಾ ಮಾಡಬೇಕೊ
ಅದನ್ನೆಲ್ಲಾ ನಾನು ಮಾಡುತ್ತೇನೆ ಎಂದು ಹೇಳಿದರು

ನನಗೆ ಬಿಜೆಪಿ ಮಾತ್ರ ಅಲ್ಲ. ಕರ್ನಾಟಕ ರಾಜ್ಯ ರೈತ ಸಂಘ ಸಹ ಬೆಂಬಲ ಕೊಟ್ಟಿದೆ. ನನಗೆ ಕಾಂಗ್ರೆಸ್ ನವರು ಸಹ ಬೆಂಬಲ ಕೊಡ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಅಂತ ಕ್ಷೇತ್ರ ಬಿಟ್ಟುಕೊಟ್ಟಿದೆ. ಆದರೆ ಅಲ್ಲಿನ ಕಾರ್ಯಕರ್ತರಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ ಎಂದರು. ಕೆಲವೆಡೆ ಪ್ರಚಾರಕ್ಕೆ ಹೋದಾಗ ರಸ್ತೆಗಳನ್ನು ತೋರಿಸಿದ್ರು. ಕಾಂಗ್ರೆಸ್ ಪಕ್ಷಕ್ಕೆ ಹಿಂದಿನ ಚುನಾವಣೆಯಲ್ಲಿ ಲೀಡ್ ಜಾಸ್ತಿ ಬಂದ ಪ್ರದೇಶ ಅದಾಗಿತ್ತು. ಅಂತಹ ಪ್ರದೇಶದಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಎಂದರು.

ಪಕ್ಷೇತರ ಅಭ್ಯರ್ಥಿಯಾಗಿ, ಮಹಿಳೆಯಾಗಿ, ನಾನು ಯಾರನ್ನು ಫೇಸ್ ಮಾಡ್ತಿದ್ದೀನಿ, ಹೋರಾಡುತ್ತಿದ್ದೇನೆ ಅಂತ ಮಾತಲ್ಲಿ ಹೇಳೋಕೆ ಆಗಲ್ಲ. ಮಂಡ್ಯ ಸ್ಪಾಟ್ ಲೈಟ್. ಮಂಡ್ಯ ಯೂನಿಕ್ ಆಗಿದೆ. ರಾಜಕೀಯ, ಸಿನಿಮಾ ಸೇರಿದಂತೆ ಎಲ್ಲವನ್ನೂ ಭಾವನಾತ್ಮಕವಾಗಿ ನೋಡುತ್ತಾರೆ. ಅದಕ್ಕೆ ಮಂಡ್ಯ ಅಂದರೆ ವಿಶೇಷ ಎಂದು ಸುಮಲತಾ ಹೇಳಿದರು.

ನಾನು ಪಕ್ಷೇತರರಾಗಿ ಸ್ಪರ್ಧೆ ಮಾಡುವ ಮುನ್ನ ಅಲ್ಲಿನ ಅಭಿಮಾನಿಗಳನ್ನು ಕೇಳಿದೆ. ಕಾಂಗ್ರೆಸ್ ಟಿಕೆಟ್ ಕೊಡ್ತಿಲ್ಲ ಏನ್ಮಾಡ್ಲಿ ಅಂತ. ಆಗ ಅಲ್ಲಿನ ಜನರು ನೀವು ಪಕ್ಷೇತರರಾಗಿ ನಿಲ್ಲಿ ಅಂತ ಹೇಳಿದ್ರು. ನಾನು ಪಕ್ಷೇತರರಾಗಿ ನಿಲ್ಲೋದ್ಕಿಂತ. ಬೇರೊಂದು ರಾಷ್ಟ್ರೀಯ ಪಕ್ಷದ ಚಿಹ್ನೆಯಡಿ ನಿಲ್ಲಬಹುದಿತ್ತು. ನನಗೆ ಸಾಕಷ್ಟು ಆಫರ್‍ಗಳು ಬಂದಿದ್ದವು.ಇನ್ನು ಕೆಲವರು ನೇರವಾಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಸಿ, ರಾಜ್ಯಸಭೆ ಸದಸ್ಯರನ್ನಾಗಿ ಮಾಡುತ್ತೇವೆ ಎಂದರು. ಆದರೆ, ನನಗೆ ಮಂಡ್ಯ ಜನರ ವಿಶ್ವಾಸ ಬೇಕಿತ್ತು ಹಾಗಾಗಿ ಸ್ಪಧೀಸುತ್ತೀದ್ದೇನೆ ಎಂದು ಹೇಳಿದರು.

ಸೇಡಿನ ರಾಜಕಾರಣ ಮಾಡುವ ಮೂಲಕ ಅಲ್ಲಿನ ಜನರಿಗೆ ಅನ್ಯಾಯ ಮಾಡಿದ್ದಾರೆ. ಅನೇಕ ಕಡೆ ನಾನು ಈ ತರ ನೋಡಿದ್ದೇನೆ. ಅಲ್ಲಿನ ದಬ್ಬಾಳಿಯನ್ನು ನೋಡಿದ್ದೇನೆ. ಅಂಬರೀಷ್ ಅಜಾತ ಶತ್ರು ಆಗಿದ್ರು. ಯಾವ ಪಕ್ಷವನ್ನು ಅವರು ವಿರೋಧಿಸುತ್ತಿರಲಿಲ್ಲ. ನಾನು ನಾಮಪತ್ರ ಸಲ್ಲಿಸುವ ಕೊನೇ ಕ್ಷಣದವರೆಗೂ ಯೋಚಿಸಿದ್ದೇನೆ. ಇದು ಮುಂದೆ ನನಗೆ ಪರಿಣಾಮ ಬೀರುತ್ತಾ, ನನ್ನ ಮಗನಿಗೆ ತೊಂದರೆ ಆಗುತ್ತಾ ಅಂತ ಯೋಚಿಸಿದ್ದೇ ಎಂದು ತಿಳಿಸಿದ್ದಾರೆ.

ಇನ್ನು ಪ್ರಚಾರಕ್ಕೆ ಚಿರಂಜೀವಿ, ರಜನಿ ಬರುತ್ತಾರೆ ಎಂಬುದು ಕೇವಲ ಊಹಾಪೋಹ. ನಾನು ಎಲ್ಲೂ ಅವರು ಬರುತ್ತಾರೆ ಅಂತ ಹೇಳಿಲ್ಲ. ಹಾಗೆ ದರ್ಶನ್, ಯಶ್ ನಟರಾಗಿ ಬಂದಿಲ್ಲ ನನ್ನ ಮಕ್ಳಾಗಿ ಬಂದಿದ್ದಾರೆ ಎಂದರು.