ಮುಂಬೈ(ಫೆ:11): ಆಫ್ರಿಕಾ ಖಂಡದ ಸೆನೆಗಲ್ ದೇಶದಲ್ಲಿ ಸಿಕ್ಕಿಬಿದ್ದಿರುವ ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಗಡಿಪಾರು ಮಾಡಿಸಿಕೊಂಡು ಬರುವ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಕಂಡುಬರುತ್ತಿದೆ. ಬಂಧನದ ಬಳಿಕ ಹೊಸ ವರಸೆಯನ್ನು ಆರಂಭಿಸಿರುವ ಪಾತಕಿ,ನಾನು ರವಿ ಪೂಜಾರಿಯೇ ಅಲ್ಲ,ಆಫ್ರಿಕಾ ಖಂಡದ ಬುರ್ಕಿನಾ ಫಾಸೋ ದೇಶದ ಪ್ರಜೆ ಅಂಥೋಣಿ ಫರ್ನಾಂಡಿಸ್ ಎಂದು ವಾದಿಸುತ್ತಿದ್ದಾನೆ. ಇದಕ್ಕೆ ಸಾಕ್ಷಿಯಾಗಿ ರವಿ ಪೂಜಾರಿ ಪರ ವಕೀಲರು ‘ಅಂಥೋಣಿ ಫರ್ನಾಂಡಿಸ್’ ಹೆಸರಿನಲ್ಲಿರುವ ಪಾಸ್ಪೋರ್ಟ್ ಅನ್ನು ಸೆನೆಗಲ್ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.

ಚಿತ್ರನಟರಿಗೆ,ಉದ್ಯಮಿಗಳಿಗೆ ಕರೆ ಮಾಡಿ ಬೆದರಿಸಿ ಆತಂಕಕ್ಕೆ ದೂಡಿದ್ದ ರವಿ ಪೂಜಾರಿಯನ್ನು ಭಾರತಕ್ಕೆ ಗಡಿಪಾರು ಮಾಡಿಸಿಕೊಂಡು ಬರಲೇಬೇಕು ಎಂದು ಪಣತೊಟ್ಟು ನಿಂತಿರುವ ವಿದೇಶಾಂಗ ಸಚಿವಾಲಯ,ಅವನ ಹಾಗೂ ಅವನ ಗ್ಯಾಂಗ್ ಗೆ ಸಂಬಂಧಿಸಿದ ಸಾಕ್ಷಿಗಳನ್ನು ಸೆನೆಗಲ್ ಗೆ ನೀಡಿದೆ ಅದಲ್ಲದೇ ಭಾರತದಲ್ಲಿರುವ ರವಿ ಪೂಜಾರಿ ಬಂಧುಗಳ ಡಿಎನ್ಎ ಮಾದರಿಯನ್ನು ಅತೀ ಶೀಘ್ರದಲ್ಲಿ ಸೆನೆಗಲ್ ಗೆ ರವಾನಿಸುವಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ಸೂಚಿಸಿದೆ.