ಇಸ್ಲಾಮಾಬಾದ್(ಫೆ.20): ಜಮ್ಮು ಕಾಶ್ಮೀರದ ಪುಲ್ವಾಮ ಉಗ್ರರ ಭೀಕರ ದಾಳಿಯನ್ನು ಪಾಕಿಸ್ತಾನದ ಕೆಲ ಯುವ ಜನತೆ ಖಂಡಿಸಿದ್ದಾರೆ.

ಹೌದು ಸಾಮಾಜಿಕ ಜಾಲತಾಣಗಳಲ್ಲಿ ನಾನು ಪಾಕಿಸ್ತಾನಿ ಆದರೆ ನಾನು ಪುಲ್ವಾಮ ದಾಳಿಯನ್ನು ಖಂಡಿಸುತ್ತೇನೆ ಎಂಬ ಪೋಸ್ಟ್ ಗಳನ್ನು ಹಾಕುವ ಮೂಲಕ ಮಾನವೀಯತೆಗೆ ಬೆಲೆ ನೀಡಿದ್ದಾರೆ.

ನಾನು ಪಾಕಿಸ್ತಾನಿ ಮತ್ತು ಪುಲ್ವಾಮಾ ದಾಳಿಯನ್ನು ಖಂಡಿಸುತ್ತೇನೆ, ಎಂದು ಯುವ ಪತ್ರಕರ್ತೆ ಮತ್ತು ಭಾರತ- ಪಾಕ್ ಶಾಂತಿ ಹೋರಾಟಗಾರ್ತಿ ಸೆಹೈರ್ ಮಿರ್ಜಾ ಪ್ಲೇಕಾರ್ಡ್ ಹಿಡಿದುಕೊಂಡಿರುವ ತಮ್ಮ ಫೋಟೋವನ್ನು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಈ ಫೋಟೋ ಅಡಿಯಲ್ಲಿ ದೇಶಭಕ್ತಿಗಾಗಿ ನಾನು ಮಾನವೀಯತೆಯನ್ನು ಮಾರುವುದಿಲ್ಲ ಎಂದು ಬರೆದು ಪುಲ್ವಾಮ ದಾಳಿಯನ್ನು ಖಂಡಿಸಿದ್ದಾರೆ. ಅವರಿಗೆ ಕೆಲ ಪಾಕ್ ಯುವತಿಯರು ಕೂಡ ಸಾಥ್ ಕೊಟ್ಟಿದ್ದಾರೆ.

ಅಮನ್ ಕಿ ಆಶಾ ಎಂಬ ಫೇಸ್‍ಬುಕ್ ಗ್ರೂಪ್ ಪೇಜ್ ಈ ಫೋಸ್ಟ್ ಗಳನ್ನು ಶೇರ್ ಮಾಡಿ ಯುವತಿಯರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಫೋಸ್ಟ್‍ಗೆ ಪ್ರತಿಕ್ರಿಯಿಸಿದ ಸೆಹೈರ್ ಮಿರ್ಜಾ ಕಾಶ್ಮೀರದಲ್ಲಿ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ಉಗ್ರ ದಾಳಿ ನಮಗೆ ತೀವ್ರ ನೋವು ತಂದಿದೆ. . ಯುದ್ಧ ಮತ್ತು ಭಯೋತ್ಪಾದನೆ ವಿರುದ್ಧ ಮಾತನಾಡಲು ನಮಗೆ ಹೆಚ್ಚು ವಿವೇಕಯುಳ್ಳ ಧ್ವನಿಗಳು ಬೇಕಾಗಿವೆ. ದಾಳಿಯನ್ನು ಖಂಡಿಸುವುದು ಮಾತ್ರವಲ್ಲದೆ ನಮ್ಮ ಭಾರತೀಯ ಸ್ನೇಹಿತರ ಜೊತೆ ಭಾವನೆ ವ್ಯಕ್ತಪಡಿಸಲು ನಾವು ಈ ಅಭಿಯಾನ ಪ್ರಾರಂಭಿಸಿದ್ದೇವೆ. ಪಾಕ್ ಪ್ರಜೆಗಳೇ, ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ನಮ್ಮೊಂದಿಗೆ ಕೈ ಜೊಡಿಸಿ ಎಂದು ಕರೆ ನೀಡಿದ್ದಾರೆ.

ಪಾಕಿಸ್ತಾನಿ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಇ-ಮೊಹಮ್ಮದ್ ಸಂಘಟನೆ ಪುಲ್ವಾಮಾ ದಾಳಿಯ ಹೊಣೆ ಹೊತ್ತುಕೊಂಡಿದೆ. ಆದರೆ ಇದರಲ್ಲಿ ನಮ್ಮದೇನೂ ಪಾತ್ರವಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.