ಕಲಬುರ್ಗಿ(ನ.02) ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ಜೆ ಕಲಾಂ ತಿದ್ದುಪಡಿ ಜಾರಿಗಾಗಿ ಅವಿರತ ಹೋರಾಟ ನಡೆಸಿದ್ದ ಮಾಜಿ ಸಚಿವ ವೈಜನಾಥ್ ಪಾಟೀಲ್ (82) ಅವರು ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು.

1984ರಲ್ಲಿ ತೋಟಗಾರಿಕೆ ಸಚಿವರಾಗಿ ಹಾಗೂ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 1994ರಲ್ಲಿ ನಗರಾಭಿವೃದ್ಧಿ ಸಚಿವರಾಗಿಯೂ ವೈಜನಾಥ್ ಪಾಟೀಲ್ ರು ಸೇವೆಯನ್ನು ಸಲ್ಲಿಸಿದ್ದರು. ಮೂಲತಃ ಬೀದರ್ ಜಿಲ್ಲೆಯವರಾದ ವೈಜನಾಥರು ಪತ್ನಿಯ ಊರು ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ನೆಲೆಸಿದ್ದರು. ಅಲ್ಲಿಂದಲೇ ಶಾಸಕರಾಗಿ ಎರಡು ಬಾರಿ ಆಯ್ಕೆಯಾಗಿದ್ದರು.

ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುವ ರಾಜ್ಯದ ಅತಿ ಹಿಂದುಳಿದ ಪ್ರದೇಶವಾದ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ ಪಾಟೀಲರು ಹಲವಾರು ಹೋರಾಟ ಚಳುವಳಿಗಳನ್ನು ನಡೆಸಿ ವಿಶೇಷ ಸ್ಥಾನಮಾನ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದರು. ಹೆದ್ರಾಬಾದ್ ಕರ್ನಾಟಕ ಭಾಗದ ಜನರಿಗೆ ಹಲವು ಅನುಕೂಲ ಕಲ್ಪಿಸುವ ಮತ್ತು ಅಲ್ಲಿನ ಅಭಿವೃದ್ಧಿಗೆ ಅವಕಾಶ ಮಾಡಿಕೊಡುವ 371ಜೆ ವಿಧಿ ಜಾರಿಗೆ 20 ವರ್ಷಗಳಷ್ಟು ಹಿಂದೆಯೇ ಒತ್ತಾಯಿಸಿ ಹೋರಾಟ ನಡೆಸಿದ್ದರು.

ವೈಜನಾಥ್ ಪಾಟೀಲ್ ಅವರಿಗೆ ಮೂರು ಜನ ಗಂಡು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಚಿಂಚೋಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.