ಬೆಂಗಳೂರು(ಆಗಸ್ಟ್.19) ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯನ್ನು ನೀಡಲಾಗಿದೆ.

ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಹಾಗು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಮಿಳುನಾಡಿನಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದಾಗಿ ರಾಜ್ಯದಲ್ಲಿ ಮಳೆಯಾಗಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ ಎಂದು ಮುನ್ಸೂಚನೆ ಹೇಳಿದೆ.

ನಿನ್ನೆ ದಾವಣಗೆರೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ದೇವರಾಜ ಅರಸು ಬಡಾವಣೆಯಲ್ಲಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬಾಗಲಕೋಟೆಯ ಚಿಕ್ಕಪಡಸಲಗಿಯಲ್ಲಿ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಅಥಣಿಯ ದರೂರು-ಹಳ್ಯಾಳ ಸೇತುವೆ ಬಿರುಕು ಬಿಟ್ಟಿದ್ದು, ಇದರಿಂದಾಗಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.