ಹಾಸನ/ಮಡಿಕೇರಿ/ಕೋಲಾರ(ಮೇ.31): ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಿದ್ದು ಗುಡುಗು, ಸಿಡಿಲು ಸಹಿತ ವರುಣ ಅಬ್ಬರಿಸಿದ್ದಾನೆ.

ಹಾಸನ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಗುರುವಾರ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಗಾಳಿ ಸಹಿತ ಧಾರಾಕಾರ ಮಳೆ ಆಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ವಾಹನ ಸವಾರರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಬರಗಾಲದಿಂದ ಹಾಸನ ಜಿಲ್ಲೆ ತತ್ತರವಾಗಿದ್ದು. ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ.

ಇನ್ನು ಕೊಡಗು ಜಿಲ್ಲೆಯ ಕೆಲವೆಡೆ ವರುಣನ ಅಬ್ಬರ ಜೋರಾಗಿತ್ತು. ದಿಢೀರ್ ಆಗಿ ಸುರಿದ ಮಳೆಗೆ ದ್ವಿಚಕ್ರ ವಾಹನ ಸವಾರರ ಪರದಾಡುವಂತಾಯಿತು. ಮಡಿಕೇರಿ ನಗರ ಸೇರಿದಂತೆ ವಿವಿಧೆಡೆ ವರುಣನ ಅಬ್ಬರ ಜೋರಾಗಿತ್ತು.

ಕೋಲಾರದಲ್ಲಿ ಮಾಲೂರು ಭಾಗದಲ್ಲಿ ಗಾಳಿ ಸಹಿತ ಭರ್ಜರಿ ಮಳೆ ಆಗಿದೆ. ಬಾರಿ ಗಾಳಿಗೆ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅಲ್ಲದೆ ವಾಹನ ಸವಾರರು ಕೂಡ ಪರದಾಡುವಂತಾಯಿತು

ಒಟ್ಟಾರೆ ಬಿಸಿಲ ಬೇಗೆಯಿಂದ ಬೆಂದಿದ್ದ ರೈತರು ವರುಣನ ಆಗಮನದಿಂದ ಖುಷಿಯಾಗಿದ್ದಾರೆ.