ಬೆಂಗಳೂರು(ಜು:11): ಕೆಲವು ದಿನಗಳಿಂದ ನಡೆಯುತ್ತಿರುವ ಗೊಂದಲಗಳನ್ನು ಗಮನಿಸಿ ವಿರೋಧ ಪಕ್ಷದ ನಾಯಕರು ಸಿಎಂ ಕುಮಾರಸ್ವಾಮಿಗೆ ರಾಜೀನಾಮೆ ನೀಡಲು ಒತ್ತಾಯಿಸಿದ್ದರು.

ಈ ವಿಚಾರವಾಗಿ ತುರ್ತು ಸಚಿವ ಸಂಪುಟ ಸಭೆಗೂ ಮುನ್ನ ಕುಮಾರಕೃಪಾ ಅತಿಥಿ ಗೃಹದಲ್ಲಿ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನೇಕೆ ರಾಜೀನಾಮೆ ನೀಡಬೇಕು, ರಾಜೀನಾಮೆ ನೀಡುವ ಅಗತ್ಯ ಏನಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ನಡುವೆ ಕಳೆದ ಮೂರು ದಿನಗಳಿಂದ ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ಬೀಡುಬಿಟ್ಟಿರುವ ಜೆಡಿಎಸ್ ಶಾಸಕರು ನಾಳೆವರೆಗೂ ಅಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆಗಳಿವೆ. ನಾಳಿನ ಅಧಿವೇಶನಕ್ಕೆ ರೆಸಾರ್ಟ್‍ನಿಂದಲೇ ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಅತೃಪ್ತ ಶಾಸಕರು ತಮ್ಮ ರಾಜೀನಾಮೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಸುಪ್ರೀಂಕೋರ್ಟ್‍ನಿಂದ ಯಾವ ತೀರ್ಪು ಹೊರಬೀಳಬಹುದು ಎಂಬುದನ್ನು ಕಾದು ನೋಡಲಾಗುತ್ತಿದೆ. ಆನಂತರ ಯಾವ ಸ್ವರೂಪದ ಕಾರ್ಯತಂತ್ರ ನಡೆಸಬೇಕೆಂಬ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದು ತಿಳಿದುಬಂದಿದೆ.