ಬೆಂಗಳೂರು(ಜು:18): ಬಿಬಿಎಂಪಿ ಕಾಮಗಾರಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರುವುದು ಸಾಬೀತುಪಡಿಸಿದರೆ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆಂದು ಲೋಕಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಬಿಬಿಎಂಪಿ ನಾಲ್ಕೂವರೆ ಸಾವಿರ ಕೋಟಿ ರೂ. ಕಾಮಗಾರಿಗಳನ್ನು ಕೆಆರ್‍ಐಡಿಎಲ್‍ಗೆ ಕೊಡಿಸಲು ಬಿಬಿಎಂಪಿ ಆಯುಕ್ತರಿಗೆ ಹೇಳಿದ್ದರೆ ಅದನ್ನು ಸಾಬೀತುಪಡಿಸಲಿ . ನಾನು ಯಾರ ಮೇಲೂ ಆರೋಪ ಹೊರಿಸುವುದಿಲ್ಲ ಎಂದು ಅವರು ಹೇಳಿದರು.ಕಳೆದ 2005-06ರಲ್ಲಿ ದಾಬಸ್‍ಪೇಟೆ-ಸೋಲೂರು-ಮಾಗಡಿ-ರಾಮನಗರ-ಕನಕಪುರ- ಆನೇಕಲ್-ಹೊಸಕೋಟೆ- ದೇವನಹಳ್ಳಿ-ದಾಬಸ್‍ಪೇಟೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ನಾಲ್ಕು ಸಾವಿರ ಕೋಟಿ ಬೇಕಾಯಿತು. ಈಗ 17 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಉಪನಗರ ವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಿಂದಿನ ಸರ್ಕಾರಗಳು ಈ ಯೋಜನೆ ಬಗ್ಗೆ ಗಮನ ಹರಿಸಿಲ್ಲ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ ಮಾಡಲು 2013ರಲ್ಲಿ ಕ್ರೆಡಲ್‍ಗೆ ಕೊಡಲಾಗಿದೆ. 4 ವರ್ಷಗಳ ಕಾಲ ಏನೂ ಮಾಡಿಲ್ಲ. ಕಳೆದ 10 ತಿಂಗಳಿನಲ್ಲಿ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ತಮ್ಮ ಇಲಾಖೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ನೀಡಿದರು.