ಮಂಡ್ಯ (ಮಾ.14): ನಿಖಿಲ್ ರಾಜಕೀಯ ಪ್ರವೇಶದ ಹಿಂದೆ ಯಾವುದೇ ವ್ಯಾಮೋಹವಿಲ್ಲ ತಂದೆ ಪರವಾಗಿ ಪಕ್ಷಕ್ಕೆ ದುಡಿಯುತ್ತಾನೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಗೆ ಹೃದಯ ಶಸ್ತ್ರ ಚಿಕಿತ್ಸೆಯಾಯಿತು. ಈ ವೇಳೆ ನಾನು ತಂದೆ ಜೊತೆ ನಿಂತು ಪಕ್ಷಕ್ಕಾಗಿ ಹೋರಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ಈ ಮಾತು ನನ್ನ ಮನಕ್ಕೆ ನಾಟಿತು. ನಿಖಿಲ್ ರಾಜಕೀಯ ಪ್ರವೇಶದ ಹಿಂದೆ ಯಾವುದೇ ವ್ಯಾಮೋಹವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಖಿಲ್ ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರು. ಆದರೆ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಾಗ ಮರುಗಿದರು. ನಾನು ನಿಮ್ಮ ಪರ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಆತ ಹೇಳಿದ. ತಂದೆ ಜೊತೆ ಕಷ್ಟಕಾಲದಲ್ಲಿ ನಿಂತು ನಿಖಿಲ್ ಕೆಲಸ ಮಾಡುತ್ತಾರೆ ಎಂದು ವಿಶ್ವಾಸವಿದೆ ಎಂದರು.

ನಾನು ಹತ್ತೂವರೆ ತಿಂಗಳು ಪ್ರಧಾನಿಯಾಗಿ ದೇಶದ ಸೇವೆ ಮಾಡಿದ್ದೇನೆ . ಆಗ ಮಾಡಿದ ಕೆಲಸ ಈಗ ಗುರುತಿಸುವ ಕಾಲ ಬಂದಿದೆ. ಆಗ ಸಿಎಂ ಆಗಿ ರಾಜೀನಾಮೆ ಕೊಡಲು ಇಷ್ಟ ಇರಲಿಲ್ಲ. ಕರ್ನಾಟಕದಲ್ಲೇ ಸೇವೆ ಮಾಡೋ ಆಸೆ ಇತ್ತು. ಆದ್ರೂ ಅನಿವಾರ್ಯವಾಗಿ ಪ್ರಧಾನಿ ಪಟ್ಟಕ್ಕೇರಿದೆ ಎಂದು ಹಳೆ ಘಟನೆಯನ್ನು ಬಿಚ್ಚಿಟ್ಟರು.

ನಾನು ಜನರಿಗಾಗಿ ಹೋರಾಟ ಮಾಡುತ್ತೇನೆ. ಮಂಡ್ಯ ಕರ್ನಾಟಕ ರಾಜಕೀಯದ ಹೃದಯವಾಗಿದೆ. ಗೋ ಬ್ಯಾಕ್ ನಿಖಿಲ್’ ಅಭಿಯಾನದಿಂದ ಮನಸ್ಸಿಗೆ ಬೇಸರವಾಗಿದೆ. ಕ್ಷೇತ್ರದ ಜನರ ಆಶೀರ್ವಾದ ನಿಖಿಲ್ ಮೇಲೆ ಇರಲಿ. ಆತನಿಗೆ ಒಂದು ಬದ್ಧತೆ ಇದೆ. ಅದಕ್ಕೆ ನಿಮ್ಮ ಬೆಂಬಲ ಬೇಕು ಎಂದರು.