ಮೈಸೂರು(ಜೂ:01): ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕುರುಬ ಜನಾಂಗದವರಿಗೆ ಟಿಕೆಟ್‌ ನೀಡದೇ ಇರುವುದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅಸಮಾಧನಗೊಂಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಕೂಡ ಹಲವಾರು ಚುನಾವಣೆಗಳನ್ನು ನೋಡಿದ್ದೇನೆ, ಕೆ ಆರ್ ನಗರದಲ್ಲಿ ಎಲ್ಲಾ ಸಮಾಜದವರು ಇದ್ದಾರೆ, ಜೆಡಿಎಸ್ ನಿಂದ ಕುರುಬರಿಗೆ ಟಿಕೆಟ್ ನೀಡಲು ಮುಂದಾಗಲಿಲ್ಲ, ನಾನು ಜೆಡಿಎಸ್ ಸೇರಿದ ಮೇಲೆ ಕುರುಬರು ನನ್ನ ಜೊತೆಯಲ್ಲಿದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ ಎಂದಿದ್ದಾರೆ.

ಸುಮಲತಾ ಅವರನ್ನು ಜನರು ಮನಸ್ಸಿನಿಂದ ಗೆಲ್ಲಿಸಿದ್ದಾರೆ. ನಿಮ್ಮ ಮಾತಿನಿಂದ ಜನರ ಮನಸ್ಸನ್ನು ಕೆಡಿಸದಿರಿ ಎಂದು ಪುರಸಭೆ ಚುನಾವಣೆಯ ಜವಾಬ್ದಾರಿ ಹೊತ್ತಿದ್ದ ಸಾ.ರಾ ಮಹೇಶ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ನಾನು ಹೇಳಿದವರಿಗೆ ಪಕ್ಷ ಟಿಕೆಟ್ ನೀಡಿಲ್ಲ ಎಂದಿರುವ ವಿಶ್ವನಾಥ್ ಅವರು ಜೆಡಿಎಸ್ ಪಕ್ಷದಲ್ಲಿ ಕುರುಬರಿಗೆ ಆದ್ಯತೆಯೇ ಇಲ್ಲ,ನಮ್ಮ ದುರಹಂಕಾರದಿಂದ ಪಕ್ಷಕ್ಕೆ ಸೋಲಾಗಿದೆ ಜೆಡಿಎಸ್ ನಲ್ಲಿ ಕಾರ್ಯಕರ್ತರಿಗಾಗಲೀ, ನಾಯಕರಿಗಾಗಲೀ ಹಣವೇ ಮುಖ್ಯ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.