ಬೆಂಗಳೂರು(ಆ:12): ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ಕರ್ನಾಟಕ ಭಾಗದ ನೆರೆಪೀಡಿತ ಭಾಗಗಳಲ್ಲಿ ನಿನ್ನೆ ವೈಮಾನಿಕ ಸಮೀಕ್ಷೆ ನಡೆಸಿದರೂ ಪರಿಹಾರಧನ ಘೋಷಣೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರವಾಹದ ವಿಚಾರದಲ್ಲಿ ರಾಜಕೀಯ ಬೆರೆಸುವುದಿಲ್ಲ, ರಾಜ್ಯದಲ್ಲಿ ಸುಮಾರು 4-5ಲಕ್ಷ ಕುಟುಂಬಗಳು ಮನೆ ಬಿಟ್ಟು ಉಟ್ಟ ಬಟ್ಟೆಯಲ್ಲೇ ಹೊರಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರು ನೆರವಿನ ಬಗ್ಗೆ ಪ್ರಕಟ ಮಾಡಬೇಕಿತ್ತು. ಯಾವುದೇ ಭರವಸೆಯನ್ನು ನೀಡದೇ ವಾಪಸ್ ಹೋಗಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ತಕ್ಷಣ 4ರಿಂದ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ ಅವರು, ಕೇಂದ್ರ ಸರ್ಕಾರ ನೆರವಿನ ಭರವಸೆ ನೀಡಿದರೆ ಸಂತ್ರಸ್ತರ ಜನರಿಗೂ ಸಾಂತ್ವನ ಸಿಕ್ಕಂತಾಗುತ್ತದೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿಯನ್ನು ಅಂದಾಜಿಸಲು ಒಂದು ತಿಂಗಳು ಬೇಕಾಗಬಹುದು ಅಷ್ಟು ದೊಡ್ಡ ಪ್ರಮಾಣದಲ್ಲಿ ಈ ಭಾರಿ ಅಷ್ಟು ಅನಾಹುತ ಉಂಟಾಗಿದೆ ಎಂದರು.