ಬೆಂಗಳೂರು(ಜು:06): ದೋಸ್ತಿ ಸರ್ಕಾರಕ್ಕೆ ಇಂದು ದೊಡ್ಡ ಶಾಕ್‌ ಎದುರಾಗಿದ್ದು, 8 ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಶಾಸಕರುಗಳು ಈಗಾಗಲೇ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಕಛೇರಿಗೆ ತೆರಳಿದ್ದಾರೆಂದು ತಿಳಿದುಬಂದಿದೆ.

ಶಾಸಕರಾದ ರಾಮಲಿಂಗಾರೆಡ್ಡಿ(ಬಿಟಿಎಂ ಲೇಔಟ್), ಸೌಮ್ಯರೆಡ್ಡಿ (ಜಯನಗರ), ಮಹೇಶ್ ಕುಮಟಳ್ಳಿ(ಅಥಣಿ), ಬಿ.ಸಿ.ಪಾಟೀಲ್(ಹಿರೇಕೆರೂರು), ಪ್ರತಾಪ್‍ಗೌಡ ಪಾಟೀಲ್(ಮಸ್ಕಿ), ರಮೇಶ್ ಜಾರಕಿಹೊಳಿ(ಗೋಕಾಕ್), ಎಸ್.ಟಿ.ಸೋಮಶೇಖರ್(ಯಶವಂತಪುರ), ಎಚ್.ವಿಶ್ವನಾಥ್(ಹುಣಸೂರು), ನಾರಾಯಣಗೌಡ(ಕೆ.ಆರ್.ಪೇಟೆ), ಶಿವರಾಮ್ ಹೆಬ್ಬಾರ್(ಯಲ್ಲಪುರ), ಸುಬ್ಬಾರೆಡ್ಡಿ (ಬಾಗೇಪಲ್ಲಿ), ರೋಷನ್ ಬೇಗ್( ಶಿವಾಜಿನಗರ), ನಾಗೇಂದ್ರ(ಬಳ್ಳಾರಿ ಗ್ರಾಮಾಂತರ) ಅವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆನಂದ್‌ ಸಿಂಗ್‌ ಹಾಗೂ ರಮೇಶ್‌ ಜಾರಕಿಹೊಳಿ ಈಗಾಗಲೇ ರಾಜೀನಾಮೆ ನೀಡಿದ್ದರಾದರೂ ರಮೇಶ್‌ ಜಾರಕಿಹೊಳಿ ಕ್ರಮಬದ್ದವಾಗಿ ತಮ್ಮ ರಾಜೀನಾಮೆ ಸಲ್ಲಿಸದ ಕಾರಣ ಇಂದು ಮತ್ತೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.ಇಂದು ದಿಢೀರ್‌ ಆಗಿ ನಡೆದ ಈ ರಾಜಕೀಯ ಬೆಳವಣಿಗೆಯಿಂದಾಗಿ ದೋಸ್ತಿ ನಾಯಕರು ಕಂಗೆಟ್ಟಿದ್ದು, ಸರ್ಕಾರ ಉಳಿಸಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳ ಕುರಿತು ತುರ್ತು ಸಮಾಲೋಚನೆ ನಡೆಸಿದ್ದಾರೆ.