ಇಸ್ಲಾಮಾಬಾದ್(ಫೆ.23): ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬುದು ದೃಡಪಟ್ಟ ಮೇಲೆ ಭಾರತ ಪಾಕಿಸ್ತಾನದ ಮೇಲೆ ದಿನಕ್ಕೊಂದು ಶಾಕ್ ನೀಡುತ್ತಿದೆ. ಇದಕ್ಕೆ ನಡುಗಿರುವ ಪಾಕ್ ಉಗ್ರ ದಾಳಿಯ ಹೊಣೆ ಹೊತ್ತಿದ್ದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಜೈಶ್-ಇ-ಮೊಹಮ್ಮದ್ ಸಂಘಟನೆ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿತ್ತು, ಈ ಬೆನ್ನಲ್ಲೇ ಪಂಜಾಬ್ ಪ್ರಾಂತ್ಯದ ಬಹಾವಲ್‍ಪುರ್‍ದಲ್ಲಿರುವ ಜೈಶ್ ಸಂಘಟನೆಯ ಪ್ರಧಾನ ಕಚೇರಿಯನ್ನು ಪಂಜಾಬ್ ಸರ್ಕಾರ ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಬಹಾವಲ್‍ಪುರ್‍ದಲ್ಲಿರುವ ಜೆಇಎಂ ಪ್ರಧಾನ ಕಚೇರಿಯನ್ನು ಪಂಜಾಬ್ ಸರ್ಕಾರ ವಶಕ್ಕೆ ಪಡೆದಿದೆ ಎಂದು ಪಾಕಿಸ್ತಾನ ಮಾಹಿತಿ ಸಚಿವ ಫವದ್ ಚೌಧರಿ ಅವರು ಪಿಟಿಐಗೆ ತಿಳಿಸಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಸತತವಾಗಿ ಪಾಕಿಸ್ತಾನದ ಮೇಲೆ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಅನಿವಾರ್ಯವಾಗಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಬಹಾವಲ್‍ಪುರ್‍ದಲ್ಲಿರುವ ಜೆಇಎಂ ಮುಖ್ಯ ಕಚೇರಿಯ ಆವರಣದಲ್ಲಿರುವ ಮದ್ರೆಸ್ಸಾತುಲ್ ಸಬೀರ್ ಮತ್ತು ಜಾಮಾ ಮಸ್ಜಿದ್ ಸುಭಾನಲ್ಲಾ ಸಂಸ್ಥೆಗಳನ್ನು ಪಂಜಾಬ್ ಸರ್ಕಾರ ವಶಕ್ಕೆ ಪಡೆದಿದ್ದು, ಅವುಗಳ ನಿರ್ವಹಣೆಗಾಗಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಪಾಕ್ ಆಂತರಿಕ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲಿ ಜೆಇಎಂ ಪ್ರಧಾನ ಕಚೇರಿ ವಶಕ್ಕೆ ಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.