ನವದೆಹಲಿ(ಜ.16): ದೇಶದಲ್ಲೇ ಪ್ಯಾಸೆಂಜರ್ ವಿಮಾನಗಳ ತಯಾರಿಕೆಗೆ ಕರಡು ತಯಾರಿಸಲು ಸರಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ನಾಗರೀಕ ವಿಮಾನಯಾನ ಸಚಿವ ಸುರೇಶ್ ಪ್ರಭು ಮಂಗಳವಾರ ಹೇಳಿದ್ದಾರೆ.

2019 ಗ್ಲೋಬಲ್ ಏವಿಯೇಷನ್ ಶೃಂಗಸಭೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸುರೇಶ್ ಪ್ರಭು,ರಾಷ್ಟ್ರದ ವಾಯು ಪ್ರಯಾಣದ ಬೇಡಿಕೆಯನ್ನು ಪೂರೈಸಲು 2,300 ಹೊಸ ವಿಮಾನಗಳು ಅಗತ್ಯವಿದೆ. ಇದಕ್ಕಾಗಿ ನಾವು ಪ್ರಪಂಚದ ಉನ್ನತ ವಿಮಾನಯಾನ ಸಂಸ್ಥೆಗಳೊಂದಿಗೆ ಕೈ ಜೋಡಿಸಬಹುದು ಎಂದಿದ್ದಾರೆ.

ಭಾರತದಲ್ಲಿ ವಿಮಾನ, ನಿರ್ವಹಣೆ, ದುರಸ್ತಿ ಮತ್ತು ಮೂಲಭೂತ ಬದಲಾವಣೆಯನ್ನು ಮಾಡಬೇಕೆಂದು ಸರ್ಕಾರ ಬಯಸಿದೆ ಎಂದು ಹೇಳಿದರು. ಈ ಕೆಲಸಕ್ಕಾಗಿ ನಾವು ಅನ್ಯ ದೇಶವನ್ನು ಅವಲಂಬಿಸಿದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ. ಅಲ್ಲದೆ ಅದು ನಿರುದ್ಯೋಗ ಸಮಸ್ಯೆಯನ್ನೂ ಹೆಚ್ಚಿಸುತ್ತದೆ ಎಂದಿದ್ದಾರೆ.

ಭಾರತದಲ್ಲಿನ ವಾಯುಯಾನ ಕ್ಷೇತ್ರದ ಅಭಿವೃದ್ಧಿ ಬಹಳ ವೇಗವಾಗಿ ಹೋಗುತ್ತದೆ. ಮುಂದಿನ ಎರಡು ದಶಕಗಳಲ್ಲಿ ಭಾರತದಲ್ಲಿ ಏರ್ ಪ್ರಯಾಣಿಕರ ಸಂಚಾರ 1.12 ಶತಕೋಟಿಯನ್ನು ದಾಟಲಿದೆ ಎಂದು ವರದಿಯೊಂದು ತಿಳಿಸಿದೆ. ಸಿವಿಲ್ ಏವಿಯೇಷನ್ ಸಚಿವಾಲಯದ ಮಾಹಿತಿಯ ಪ್ರಕಾರ ಪ್ರಸ್ತುತ ಪ್ರಯಾಣಿಕರ ಸಂಚಾರವು 187 ಮಿಲಿಯನ್ಗಳಷ್ಟಿದೆ.