ಮೈಸೂರು(ಫೆ.12): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾನವೀಯ ಸಮಾಜವೇ ತಲೆತಗ್ಗಿಸುವ ಅಮಾನವೀಯ ಘಟನೆ ನಡೆದಿದೆ. ಯುವತಿಯ ಮೇಲೆ ಸಾಮೂಹಿಕ ಅತ್ಯಚಾರ ನಡೆಸಿ ಗುಪ್ತಾಂಗವನ್ನು ಬ್ಲೇಡ್ ನಲ್ಲಿ ಕೊಯ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯುವತಿಗೆ ಡ್ರಾಪ್ ಕೊಡುವ ನೆಪದಲ್ಲಿ ಕೊಳ್ಳೇಗಾಲಕ್ಕೆ ತೆರಳುವ ರಸ್ತೆಯಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಆಕೆಯ ಗೆಳೆಯ ಚಿರಾಗ್ ಹಾಗೂ ಮೂವರು ಯುವಕರು ಸೇರಿಕೊಂಡು ಅತ್ಯಾಚಾರವೆಸಗಿದ ಬಳಿಕ ಬ್ಲೇಡ್ ತೆಗೆದುಕೊಂಡು ಗುಪ್ತಾಂಗವನ್ನು ಕೊಯ್ದು ಹಿಂಸೆ ಕೊಟ್ಟಿದ್ದಾರೆ. ನಾನು ಮೈಸೂರಿಗೆ ಇತ್ತೀಚೆಗೆ ಬಂದಿದ್ದರಿಂದ ನನಗೆ ಮಾರ್ಗ ತಿಳಿದಿರಲಿಲ್ಲ. ನಂತರ ಅವರಿಂದ ಹೇಗೋ ತಪ್ಪಿಸಿಕೊಂಡು ಆಟೋದಲ್ಲಿ ಮನೆಗೆ ಬಂದೆ ಎಂದು ಸಂತ್ರಸ್ಥೆ ದೂರಿನಲ್ಲಿ ತಿಳಿಸಿದ್ದಾಳೆ

ಯುವತಿಯ ಮೇಲೆ ಫೆಬ್ರುವರಿ 3 ರಂದು ಗ್ಯಾಂಗ್ ರೇಪ್ ನಡೆದಿದೆ. ಫೆ.8 ರಂದು ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಸಂತ್ರಸ್ಥೆ ರಾತ್ರಿ ಸುಮಾರು 7 ಗಂಟೆಗೆ ಮನೆಯಿಂದ ಡಿನ್ನರ್ ಗೆಂದು ಲಲಿತ್ ಮಹಲ್ ಪ್ಯಾಲೇಸ್ ರಸ್ತೆಯಲ್ಲಿರುವ ಚಾಟ್ ಸೆಂಟರ್ ಗೆ ಹೋಗಿದ್ದಾಗ. ಮನೆಗೆ ಹಿಂದಿರುಗಲು ತನ್ನ ಸ್ನೇಹಿತನಾದ ಚಿರಾಗ್ ಎಂಬುವನಿಗೆ ಕರೆ ಮಾಡಿ ಬರುವಂತೆ ಹೇಳಿದ್ದಾಳೆ. ಕಾರಿನಲ್ಲಿ ಬಂದ ಆತ ಯುವತಿಯನ್ನು ಕೊಳ್ಳೇಗಾಲದ ಕಡೆಗೆ ಹೋಗುವ ರಸ್ತೆಯಲ್ಲಿ ಕರೆದುಕೊಂಡು ಹೋಗಿ ದಾರಿಯಲ್ಲಿ ಸಿಕ್ಕ ಮೂವರು ಅಪರಿಚಿತರ ಜೊತೆ ಸೇರಿ ಅತ್ಯಾಚಾರ ಎಸೆಗಿದ್ದಾರೆ.

ಇನ್ನು ಸಂತ್ರಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾಳೆ.

ಈ ಕುರಿತು ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಚಿರಾಗ್ ನನ್ನು ಬಂಧಿಸಿದ್ದು ಇನ್ನುಳಿದ ಮೂವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.