ಹಾವೇರಿ(ಜೂ:01): ಈ ಬಾರಿ ಸಚಿವ ಸಂಪುಟದಲ್ಲಿ ನನಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಲೋಕಸಭಾ ಚುನಾವಣೆ ಬಳಿ ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಬೆಳವಣಿಗೆಗಳಾಗುತ್ತಿದೆ. ಶೀಘ್ರ ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೈ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಕಾರ್ಯಕರ್ತರೇ ತೀರ್ಮಾನಿಸುತ್ತಾರೆ ಎಂದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಇತ್ತೀಚೆಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದು, ಅವರು ಸಚಿವ ಸ್ಥಾನ ಸಿಗುವ ಭರವಸೆ ಕೊಟ್ಟಿದ್ದಾರೆ.ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ. ಅದರ ಹೊರತಾಗಿಯೂ ಎಲ್ಲವನ್ನೂ ಕಾಲ ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‍ನಲ್ಲಿ ಎರಡು ಬಾರಿ ಶಾಸಕರಾಗಿರುವ ಬಿ.ಸಿ.ಪಾಟೀಲ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇತ್ತೀಚೆಗೆ ಆಪರೇಷನ್ ಕಮಲದ ಪ್ರಕರಣದಲ್ಲಿ ಬಿ.ಸಿ.ಪಾಟೀಲ್ ಅವರ ಹೆಸರು ಕೂಡ ಕೇಳಿಬಂದಿತ್ತು. ಆದರೆ, ಎಂದೂ ಪಕ್ಷ ಬಿಟ್ಟು ಹೋಗುವುದಾಗಿ ಬಿ.ಸಿ.ಪಾಟೀಲ್ ಹೇಳಿಲ್ಲ. ಕಾಂಗ್ರೆಸ್‍ನಲ್ಲೇ ಇದ್ದು ಅವಕಾಶ ಪಡೆಯುವ ಮಾತುಗಳನ್ನಾಡಿದ್ದಾರೆ. ಈವರೆಗೂ ಸಿದ್ದರಾಮಯ್ಯ ಅವರನ್ನು ಹೆಚ್ಚಾಗಿ ನಂಬಿಕೊಂಡಿದ್ದ ಬಿ.ಸಿ.ಪಾಟೀಲ್ ಇತ್ತೀಚಿನ ದಿನಗಳಲ್ಲಿ ಅವರ ಮೇಲೆ ವಿಶ್ವಾಸ ಕಳೆದುಕೊಂಡಂತಿದೆ. ಪರಮೇಶ್ವರ್ ಅವರ ಮಾತುಗಳ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳುವ ಮೂಲಕ ರಾಜಕೀಯವಾಗಿ ಅಚ್ಚರಿ ಮೂಡಿಸಿದ್ದಾರೆ.