ಬೆಂಗಳೂರು(ಜೂ:12): ಚಿನ್ನದ ಮೇಲಿನ ಹೂಡಿಕೆ ಹೆಸರಿನಲ್ಲಿ ಸಾವಿರಾರು ಮಂದಿಗೆ ಕೋಟ್ಯಾಂತರ ರೂ. ವಂಚಿಸಿದ ಐಎಂಎ ಜೊತೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಝಮೀರ್ ಅಹ್ಮದ್ ಖಾನ್ ಹಣಕಾಸಿನ ವ್ಯವಹಾರ ಹೊಂದಿರುವ ವಿಚಾರ ಬಹಿರಂಗವಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಝಮೀರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿದ ಅಫಿಡವಿಟ್‌ನಲ್ಲಿ ಈ ವಿವರವನ್ನು ದಾಖಲಿಸಿದ್ದಾರೆ.

ಝಮೀರ್ ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಬ್ಯಾಂಕಿನಿಂದ ಪಡೆದಿರುವ ಸಾಲದ ವಿವರಗಳಲ್ಲದೇ ಇತರ ಮೂಲಗಳಿಂದ ಹಣ ಪಡೆದ ವಿವರದ ಕಾಲಂನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಐಎಂಎ ಕಂಪೆನಿಯಿಂದ ಬೆಂಗಳೂರಿನ ರಿಚ್ಮಂಡ್ ಟೌನ್‌ನ ಸರ್ಪೆಂಟೈನ್ ಸ್ಟ್ರೀಟ್‌ನಲ್ಲಿರುವ ನಂ.38 ಹಾಗೂ 39ನೇ ಕಟ್ಟಡದ ಮಾರಾಟದ ಸಂಬಂಧ 2017ರ ಡಿಸೆಂಬರ್ 11ರಂದು 5 ಕೋ.ರೂ. ಮುಂಗಡ ಪಡೆದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಐಎಂಎ ಕಂಪನಿಯಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ವಂಚನೆಗೊಳದಗಾದವರ ಪರ ನಿಂತಿದ್ದ ಝಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಹಾಗೂ ಗೃಹಸಚಿವರನ್ನು ಮಂಗಳವಾರ ಭೇಟಿಯಾಗಿ ಈ ಪ್ರಕರಣದ ಎಸ್‌ಐಟಿ ತನಿಖೆಗೆ ಆಗ್ರಹಿಸಿದ್ದರು. ಈ ಸಂದರ್ಭ ಐಎಂಐ ಮಾಲಕ ಮನ್ಸೂರ್ ಖಾನ್‌ನ್ನು ಉದ್ದೇಶಿಸಿ, ”ನನ್ನನ್ನು ಸೇರಿದಂತೆ ನೀವು ಯಾರಿಗೆಲ್ಲ ದುಡ್ಡು ಕೊಟ್ಟಿದ್ದೀರಿ ಎಂಬುದನ್ನು ಬಹಿರಂಗಪಡಿಸಿ” ಎಂದು ಝಮೀರ್‌ ಅಹಮದ್ ಒತ್ತಾಯಿಸಿದ್ದರು. ಇದೀಗ ಐಎಂಎ ಜೊತೆ ಝಮೀರ್ ಹೆಸರು ಕೇಳಿಬಂದಿರುವುದು ವಿವಾದಕ್ಕೆ ಕಾರಣವಾಗಿದೆ.