ಬೆಂಗಳೂರು(ನ.22) 2019 ಡಿಸೆಂಬರ್ 1 ರಿಂದ ಖಾಸಗಿ ಮತ್ತು ವಾಣಿಜ್ಯ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಮುಂದೆ ವಾಹನಗಳ ದಟ್ಟಣೆಯನ್ನು ಕಡಿಮೆಗೊಳಿಸಲು ಮತ್ತು ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡಲು ಡಿಸೆಂಬರ್ 1 ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಲಾಗುತ್ತಿದ್ದು, ಟ್ಯಾಗ್ ಇಲ್ಲದ ವಾಹನಗಳು ದುಪ್ಪಟ್ಟು ಟೋಲ್ ದರ ಪಾವತಿಸಬೇಕಾಗಿದೆ.

ಎಕಾನಾಮಿಕ್ ಟೈಮ್ಸ್ ವರದಿಯ ಪ್ರಕಾರ ಫಾಸ್ಟ್‌ಟ್ಯಾಗ್‌ಗಳಿಲ್ಲದ ವಾಹನಗಳು ಟೋಲ್ ಗೇಟ್‌ನಲ್ಲಿ ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

ಈಗಾಗಲೇ ಎಲ್ಲಾ ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕವೇ ಟೋಲ್ ಸ್ವೀಕರಿಸಬೇಕು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ವಾಹನ ಮಾಲೀಕರು ವಾಹನದ ಮುಂಭಾಗದ ಕನ್ನಡಿಯಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಲು ಸೂಚನೆ ನೀಡಿದೆ.