ವಿಜಯಪುರ(ಜುಲೈ.11) ಸತತವಾಗಿ 5 ವರ್ಷಗಳಿಂದ ತೀವ್ರವಾದ ಮಳೆಯ ಕೊರತೆಯನ್ನು ಅನುಭವಿಸುತ್ತಿರುವ ಬಯಲುಸೀಮೆ ಭಾಗದ ರೈತರು, ಮುಂಗಾರು ಪ್ರಾರಂಭಗೊಂಡು ತಿಂಗಳಾಗುತ್ತಿದ್ದರೂ ಮಳೆರಾಯನ ಸುಳಿವು ಸಿಗದೆ ರೈತರು ಕಂಗಾಲಾಗಿದ್ದಾರೆ.

ವರ್ಷದ ಆರಂಭದಲ್ಲಿ ರೈತರ ಮುಖದಲ್ಲಿ ಕೊಂಚ ಮಂದಹಾಸ ಮೂಡಿಸಿದ್ದ ಮುಂಗಾರು ತಿಂಗಳು ಕಳೆದರೂ ಮಳೆ ಬಾರದೇ ಇರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ಈಗಾಗಲೇ ಕೃಷಿ ಇಲಾಖೆಯಿಂದ ಕೃಷಿ ಅಭಿಯಾನದ ಮೂಲಕ ಮಣ್ಣು ಪರೀಕ್ಷೆ ಮಡಿಸಿತ್ತಿರುವುದು, ಬಿತ್ತನೇ ಬೀಜಗಳ ಮಾಹಿತಿ, ಯಾವ ತಿಂಗಳಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ಎನ್ನುವ ಬಗ್ಗೆ ರೈತರಿಗೆ ಅಗತ್ಯ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರದ ಮುಖಂಡರು ಹೇಳುತ್ತಿದ್ದಾರೆ.

ಈ ಭಾಗದಲ್ಲಿ ಕೃಷಿಗಾಗಿ ಕೊಳವೆಬಾವಿಯನ್ನು ಕೊರೆಸಲು ಹೋದರೆ ಅಂತರ್ಜಲ ಮಟ್ಟ 1,800 ಅಡಿಗಳಷ್ಟು ಕುಸಿದಿದ್ದು, ಕೊಳವೆಬಾವಿಗಳನ್ನು ಕೊರೆಸುವ ವೆಚ್ಚವೂ ಅಧಿಕವಾಗುತ್ತಿದೆ. ಇದುವರೆಗೂ ಕೇವಲ 72 ಎಂ.ಎಂ ಮಳೆಯಾಗಿದ್ದು, ಅಲ್ಪ ನೀರಿನ ರೈತರು ತರಕಾರಿ ಬೆಳೆಗಳನ್ನು ಬೆಳೆದು ಜೀವನವನ್ನು ನಡೆಸುತ್ತಿದ್ದಾರೆ.

ಹೋಬಳಿಯಲ್ಲಿ ರಾಗಿ ಬೆಳೆ ಬೆಳೆಯುವ ಕೃಷಿ ಭೂಮಿ 2,100 ಎಕರೆ ಇದ್ದು, ತೊಗರಿ ಬೆಳೆ 100 ಎಕರೆ, ಹಸುಗಳ ಮೇವಿಗಾಗಿ ಬೆಳೆಯುವ ಜೋಳ 10 ಎಕರೆ ಇದ್ದು, ಉಳಿದ ಜಮೀನಿನಲ್ಲಿ ಹಿಪ್ಪುನೇರಳೆ ಹಾಗೂ ದ್ರಾಕ್ಷಿ ಬೆಳೆಯನ್ನು ಬೆಳೆಯುತ್ತಿದ್ದಾರೆ.