ರಾಯಚೂರು(ಜೂನ್.13) ಮಳೆ ಇಲ್ಲದೆ ಬರಗಾಲದಿಂದ ಬೆಳೆಗಳು ಕೈಕೊಟ್ಟಾಗ ಏನು ಮಾಡಬೇಕು ಎನ್ನುವ ಯೋಚನೆಯಲ್ಲಿದ್ದಾಗ ಎಮ್ಮೆಗಳ ಸಾಕಾಣಿಕೆ ಮಾಡಿಕೊಂಡಿರುವ ದೇವಸೂಗೂರು ಹೋಬಳಿ ವ್ಯಾಪ್ತಿಯ ಯರಗುಂಟ ಗ್ರಾಮದ ತಿಮ್ಮಪ್ಪ ಅಡಿಬಾಯ್ ಅವರು ಯಶಸ್ಸನ್ನು ಕಂಡಿದ್ದಾರೆ.

ಶಕ್ತಿನಗರದ ಸಮೀಪದ ಯರಗುಂಡ ಗ್ರಾಮದಲ್ಲಿ ಹೈನುಗಾರಿಕೆ ಮಾಡಿಕೊಂಡಿರುವ ಇವರು ಡಿ.ರಾಂಪುರ ಮತ್ತು ಯರಮರಸ್ ಬೈಪಾಸ್ ರೈತರ ಜಮೀನಿನಲ್ಲಿ ಸಿಗುವ ಕೃಷಿ, ತ್ಯಾಜ್ಯಗಳು, ಬದುಗಳ ಮೇಲೆ ಬೆಳೆದ ಮೇವು ಅವಲಂಭಿಸಿ ಎಮ್ಮೆಗಳನ್ನು ಸಾಕಾಣಿಕೆ ಮಾಡಿದ್ದಾರೆ. ಮೊದಲು 4 ಎಮ್ಮೆಗಳಿಂದ ಹೈನುಗಾರಿಕೆ ಆರಂಭಿಸಿದ ಇವರು ಇವತ್ತಿಗೆ 30 ಎಮ್ಮೆಗಳು ಮತ್ತು 10 ಎಮ್ಮೆ ಕರುಗಳನ್ನು ಸಾಕುತ್ತಿದ್ದಾರೆ.

ತಿಮ್ಮಪ್ಪನವರು ತಮ್ಮ ಇಬ್ಬರು ಮಕ್ಕಳನ್ನು ಸೇರಿಸಿಕೊಂಡು ಮೂರು ಜನರು ಸೇರಿ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಇವರು 1 ಲಕ್ಷ ರೂಪಾಯಿ ಮೊತ್ತದ ಮೇವು ಮತ್ತು ಸಿಪ್ಪೆಯನ್ನು ಖರೀದಿಸಿದ್ದಾರೆ. 50 ಸಾವಿರ ರೂಪಾಯಿ ವೆಚ್ಚದಲ್ಲಿ ನೀರಿನ ತೊಟ್ಟಿಯನ್ನು ನಿರ್ಮಾಣ ಮಾಡಿದ್ದಾರೆ. ರೂಪಾಯಿ 1 ಲಕ್ಷ ವೆಚ್ಚದಲ್ಲಿ ಬೋರ್ ವೆಲ್ ಹಾಕಿಸಿ ಎಮ್ಮೆಗಳ ಕುಡಿಯುವ ನೀರಿಗೆ ತೊಟ್ಟಿಯನ್ನು ನಿರ್ಮಿಸಿದ್ದಾರೆ. ಬ್ಯಾಂಕ್ ಗಳ ಮೂಲಕ 1.20 ಲಕ್ಷ ಸಾಲವನ್ನು ಪಡೆದು ಹರಿಯಾಣದ ಎರಡು ಪ್ರತ್ಯೇಕ ಹೊಸ ತಳಿಯ ಎಮ್ಮೆಗಳನ್ನು ಖರೀದಿಸಿದ್ದಾರೆ.

30 ಎಮ್ಮೆಗಳು ಸೇರಿ ದಿನಕ್ಕೆ 200 ಲೀಟರ್ ಹಾಲು ನೀಡುತ್ತಿವೆ. ಈ ಹಾಲು ರಾಯಚೂರು ನಗರ ಸೇರಿದಂತೆ ದೇವಸೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಾರೆ.

ಸರ್ಕಾರದ ಪಶುಸಂಗೋಪನೆ ಯೋಜನೆಗಳನ್ನು ಉಪಯೋಗ ಮಾಡಿಕೊಂಡು ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಇವರು ಮಾಡುತ್ತಿರುವ ಹೈನುಗಾರಿಕೆಯಿಂದ ಅಧಿಕ ಪ್ರಮಾಣದ ಲಾಭವನ್ನು ಗಳಿಸುತ್ತಿದ್ದಾರೆ. ಇವರ ಈ ಕೆಲಸದಿಂದ ಹಲವಾರು ನಿರುದ್ಯೋಗಿಗಳಿಗೆ ತಿಮ್ಮಪ್ಪನವರು ಸ್ಫೂರ್ತಿಯಾಗಿದ್ದಾರೆ.