ಬೆಂಗಳೂರು(ಜುಲೈ.17) ಈ ಬಾರಿಯೂ ಮಳೆ ಇಲ್ಲದೆ ನದಿ, ಹಳ್ಳ, ಕೊಳವೆಗಳು ಬತ್ತಿಹೋಗಿದ್ದು ಕಳೆದ ಕೆಲದಿನಗಳಿಂದ ಸುರಿದ ಮುಂಗಾರು ಮಳೆಗೆ ನದಿ, ಹಳ್ಳಗಳು ಹರಿಯುತ್ತಿದ್ದು, ರೈತರ ಮುಖದಲ್ಲಿ ಕೊಂಚ ಮಂದಹಾಸ ಮೂಡಿದೆ.

ನದಿಗಳು ತಕ್ಕಮಟ್ಟಿಗೆ ತುಂಬಿ ಹರಿಯುತ್ತಿದ್ದು, ಕೆಲವೊಂದು ಜಲಪಾತಗಳು ಮೈದುಂಬಿ ಜಿಗಿಯುತ್ತಿವೆ. ಮಳೆ ಇಲ್ಲದೆ ಒಣಗಿಹೋಗಿದ್ದ ಕಾಡುಗಳೆಲ್ಲ ಮುಂಗಾರಿನ ಆಗಮನದಿಂದ ಹಸಿರಾಗಿವೆ. ಪ್ರಕೃತಿಗೆ ಸಾಟಿ ಇಲ್ಲದಂತ ಸೊಬಗಿನ ದೃಶ್ಯಗಳು, ಹಸಿರ ನಡುವೆ ಬಂಡೆಯ ಮೇಲಿಂದ ಜಿಗಿಯುವ ಜಲಧಾರೆ ನೋಡಲು ತುಂಬಾ ಸೊಗಸು.

ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಭಾಗಗಳಲ್ಲಿ ಮಳೆಯಿಂದ ಜಲಧಾರೆಗಳು ತುಂಬಿಕೊಂಡಿವೆ. ವಿಶ್ವ ವಿಖ್ಯಾತ ಜಲಪಾತ, ಸಾತೊಡ್ಡಿ, ಮಾಗೋಡ ಫಾಲ್ಸ್, ಉಂಚಳ್ಳಿ ಫಾಲ್ಸ್, ಮುಂತಾದ ಫಾಲ್ಸ್ ತುಂಬಿ ಅರಿಯುತ್ತಿವೆ. ಬೆಳಗಾವಿ ಭಾಗದಲ್ಲಿ ಗೋಕಾಕ್ ಫಾಲ್ಸ್, ಗೊಡಚಿನಮಲ್ಕಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಇನ್ನು ದೂದ್ ಸಾಗರ್ ಫಾಲ್ಸ್ ನೋಡಲು ಬರುವವರು ರೈಲ್ವೆ ಹಳಿಯ ಮೇಲೆ ನಡೆದು ಬರಬೇಕಿತ್ತು. ಆದರೆ ಕೆಲವು ವರ್ಷಗಳಿಂದ ರೈಲ್ವೆ ಹಳಿಯ ಮೇಲೆ ನಡೆಯಬಾರದೆಂದು ಗೋವಾ ಸರ್ಕಾರ ನಿಷೇದ ಹೇರಿದೆ. ಗೋವಾಗೆ ಹೋಗುವಾಗ ರೈಲು ಫಾಲ್ಸ್ ಹತ್ತಿರ ನಿಧಾನವಾಗಿ ಚಲಿಸುವುದರಿಂದ ಆ ಸಮಯದಲ್ಲಿ ದೂದ್ ಸಾಗರ್ ಫಾಲ್ಸ್ ಕಣ್ತುಂಬಿಕೊಳ್ಳಬಹುದು.