ಬೆಂಗಳೂರು(ಜು:27): ಮೈತ್ರಿ ಸರ್ಕಾರದ ಪತನದ ಬೆನ್ನಲ್ಲೇ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಶಾಕ್ ನೀಡಿದ್ದಾರೆ.

ಯಡಿಯೂರಪ್ಪ ಸೋಮವಾರ ಬಹುಮತ ಸಾಬೀತುಪಡಿಸಬೇಕಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಕೆಲ ಅತೃಪ್ತ ಶಾಸಕರು ಇಂದು ತಮಗೆ ಕರೆ ಮಾಡಿದ್ದರು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಇಬ್ಬರು ಅತೃಪ್ತ ಶಾಸಕರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ವಾಪಸ್ಸು ಬರೋದಾಗಿ ಹೇಳಿದ್ದರು ಎಂದು ಮಾಜಿ ಸಚಿವ ಎಂ ಬಿ ಪಾಟೀಲ್‌ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಅತೃಪ್ತ ಶಾಸಕರು ಕರೆ ಮಾಡಿದ್ದು ನಿಜ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಲವು ಅತೃಪ್ತ ಶಾಸಕರು ನನ್ನನ್ನು ಸಂಪರ್ಕಿಸಿದ್ದು ನಿಜ. ಅವರೊಂದಿಗೆ ಮಾತನಾಡಬಾರದು ಎಂದು ನಾನು ಕರೆ ಸ್ವೀಕರಿಸಲಿಲ್ಲ. ಅನರ್ಹತೆ ಶಿಕ್ಷೆಗೆ ಹೆದರಿ ನನಗೆ ಕರೆ ಮಾಡಿದ್ದರು. ಹೀಗಾಗಿ ನಾನು ಕರೆ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಅತೃಪ್ತ ಶಾಸಕರು ಅನರ್ಹತೆಗೆ ಹೆದರಿ, ಮನಸ್ಸು ಬದಲಿಸಿ, ಸೋಮವಾರದ ಅಧಿವೇಶನಕ್ಕೆ ಬಂದು ಕಾಂಗ್ರೆಸ್ ಪರ ನಿಂತರೆ ಶುಕ್ರವಾರ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.