ಬೆಂಗಳೂರು:(ಫೆ21): ಇಂದು ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಸಂಜೆ 06 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಚಾಲನೆ ನೀಡಲಿದ್ದಾರೆ. ಅಥಿತಿಗಳಾಗಿ ನಟ ಅನಂತ್‍ನಾಗ್ ಹಾಗೂ ಬಾಲಿವುಡ್‍ನ ನಿರ್ದೇಶಕ, ನಿರ್ಮಾಪಕರಾದ ರಾಹುಲ್ ರವೈಲ್ ಆಗಮಿಸಲ್ಲಿದ್ದಾರೆ.

ಈ ಸಾರಿಯ ಚಲನಚಿತ್ರೋತ್ಸವದಲ್ಲಿ ಪ್ರಕೃತಿ ವಿಕೋಪವನ್ನು ಕೇಂದ್ರೀಕರಿಸಿದ ಸಾಕ್ಷ್ಯಚಿತ್ರಗಳು ಪ್ರದರ್ಶನ ಕಾಣಲಿದ್ದು, ಹಾಗೂ ಲಿಂಗಕ್ಯರಾದ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀ ಅವರನ್ನು ಕುರಿತು ನಿರ್ಮಾಣ ಮಾಡಿರುವ ಕಿರುಚಿತ್ರ ಪ್ರರ್ದಶನಗೊಳ್ಳುತ್ತಿದೆ. ಇನ್ನು ಅತ್ಯುತ್ತಮ ಚಿತ್ರಗಳಾದ ಏಳು ಸುತ್ತಿನ ಕೋಟೆ, ನಾಗರಹಾವು, ಪಡುವಾರಳ್ಳಿ ಪಾಂಡವರು, ಅಂತ, ಶುಭಮಂಗಳ, ರಂಗನಾಯಕಿ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಈ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಫೆ 28 ರ ತನಕ ನಡೆಯಲ್ಲಿದ್ದು, ಬೆಂಗಳೂರಿನ ರಾಜಾಜಿನಗರದ ಓರಾಯನ್ ಮಾಲ್‍ನ 11 ಸ್ಕ್ರೀನ್‍ಗಳಲ್ಲಿ ಹಾಗೆಯೇ ಚಾಮರಾಜಪೇಟೆಯ ಕಲಾವಿಧರ ಸಂಘದಲ್ಲಿ ಚಿತ್ರಗಳು ಪ್ರದರ್ಶನವಾಗಲಿವೆ. ಕನ್ನಡ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ನಾಗತಿಹಳ್ಳಿ ಚಂದ್ರಶೇಖರ್‍ರವರು ಹೇಳಿದಂತೆ ಈ ಬಾರಿಯ ಚಲನಚಿತ್ರೋತ್ಸವದಲ್ಲಿ 60 ರಾಷ್ಟ್ರಗಳ 125 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದಿದ್ದಾರೆ.