ಕೊಡಗು:(ಜೂನ್.07): ಕೊಡಗಿನಲ್ಲಿ ಆಂಧ್ರ ಮೂಲದ ಉದ್ಯಮಿಯೊಬ್ಬರಿಗೆ ರೆಸಾರ್ಟ್ ನಿರ್ಮಾಣ ಮಾಡುವ ಉದ್ದೇಶದಿಂದ 800 ಮರಗಳನ್ನು ಕಡಿಯಲು ಮುಂದಾಗಿದ್ದು, ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದಂತೆ ಮರಕಡಿಯುವುದನ್ನು ನಿಲ್ಲಿಸುವ ಜೊತೆಗೆ ಈ ಕುರಿತು ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

ಆಂಧ್ರ ಮೂಲದ ರೆಡ್ಡಿ ಎಂಬುವವರು ಮಡಿಕೇರಿ ತಾಲೂಕಿನ ಕೆ ನಿಡುಗಣೆಯಲ್ಲಿ 68 ಎಕರೆ ಭೂಮಿಯನ್ನು ಖರೀದಿಸಿ, 30 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಿ ಹೌಸಿಂಗ್ ಬೊರ್ಡ್ ಗೆ ಕೊಡುತ್ತೇವೆ. ಇನ್ನೂ 30 ಎಕರೆ ಜಾಗದಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೊಡಿ ಎಂದು ಕೇಳಿದಾಗ ಜಿಲ್ಲಾಡಳಿತ ಕನ್ವರ್ಷನ್ ಅನುಮತಿಯನ್ನು ನೀಡಿತ್ತು.

ಈ 30 ಎಕರೆ ಜಾಗದಲ್ಲಿ 800 ಮರ ಕಡಿಯುವ ವಿಚಾರ ಕುರಿತು ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಸಿಎಂ ಆಫ್ ಕರ್ನಾಟಕ ಟ್ವೀಟ್ ಮಾಡಿ ಅಧಿಕಾರಿಗಳನ್ನು ಎಚ್ಚರಿಸಿದೆ.

ಕೊಡಗು ಜಿಲ್ಲೆಯಲ್ಲಿ 800 ಮರಗಳನ್ನು ಕಡಿಯುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಂದೇ ಮರಗಳನ್ನು ಕಡಿಯುವುದನ್ನು ನಿಲ್ಲಿಸಿ, ವರದಿಯನ್ನು ನೀಡುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆಂದು ಟ್ವೀಟ್ ಮಾಡಲಾಗಿದೆ.