ನವದೆಹಲಿ(ಮಾ:20): ಕಾಂಗ್ರೆಸ್‌ನ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ, ‘ಜನರು ಮೂರ್ಖರೆಂದು ಭಾವಿಸುವುದನ್ನು ಪ್ರಧಾನಿ ನಿಲ್ಲಿಸಲಿ’ ಎಂದು ಸಲಹೆ ನೀಡಿದ್ದಾರೆ.

‘ಕಳೆದ ಐದು ವರ್ಷಗಳಲ್ಲಿ ಬಿಜೆಪಿಯು ಮಾಧ್ಯಮ ಸೇರಿದಂತೆ ಪ್ರತಿ ಸಂಸ್ಥೆಯನ್ನೂ ವ್ಯವಸ್ಥಿತವಾಗಿ ದಾಳಿಗೊಳಪಡಿಸಿದೆ. ಜನರು ಮೂರ್ಖರು ಎಂದು ಭಾವಿಸುವುದನ್ನು ಪ್ರಧಾನಿ ನಿಲ್ಲಿಸಲಿ. ಇವೆಲ್ಲವನ್ನೂ ಅವರು ನೋಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲಿ’ ಎಂದು ಸಲಹೆ ನೀಡಿದರು.

‘ಅಧಿಕಾರ ಮುಡಿಗೇರಿದಾಗ ಅವರಲ್ಲಿ ಎರಡು ತಪ್ಪು ಭಾವನೆಗಳು ಮೂಡುತ್ತವೆ. ಮೊದಲನೆಯದು, ಜನರನ್ನು ತಪ್ಪುದಾರಿಗೆ ಎಳೆಯುವುದು ಸುಲಭ. ಎರಡನೆಯದು, ಅವರ ವಿರುದ್ಧ ಮಾತನಾಡುವವರು ಹೆದರುತ್ತಾರೆ. ಅವರೇನೇ ಮಾಡಿದರೂ ನಾವು ಭಯಪಟ್ಟುಕೊಂಡಿಲ್ಲ. ಅವರು ಬಯಸಿದಷ್ಟು ನಮಗೆ ಕಿರುಕುಳ ನೀಡಬಹುದು, ನಾವು ಹೋರಾಟ ಮುಂದುವರಿಸುತ್ತೇವೆ’ ಎಂದಿದ್ದಾರೆ.