ಬೆಂಗಳೂರು(ಆ:07): ನಾವು ಯಡಿಯೂರಪ್ಪನವರ ರೀತಿ ಆತುರ ಪಡುವುದಿಲ್ಲ, ಅವರು ಎಷ್ಟು ದಿನ ಒನ್ ಮ್ಯಾನ್ ಶೋ ನಡೆಸುತ್ತಾರೋ ನಡೆಸಲಿ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ರಾಜ್ಯ ಸರ್ಕಾರದಲ್ಲಿ ಸಂಪುಟ ರಚನೆಯಾಗದ ಕುರಿತು ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ಯಾರಾದರೂ ಏನಾದರೂ ಕೇಳಿದರೆ ಯಡಿಯೂರಪ್ಪನವರು ದೆಹಲಿಯನ್ನು ತೋರಿಸುತ್ತಾರೆ, ಅವರು ವಿರೋಧ ಪಕ್ಷದಲ್ಲಿದ್ದಾಗ ಕುಮಾರಸ್ವಾಮಿ ಅವರ ಸರ್ಕಾರ ರಚನೆಯಾಗುವ ಮುನ್ನವೇ ರೈತರ ಕಾಳಜಿ, ಸಾಲ ಮನ್ನಾ ಎಂದು ಕೂಗಾಡುತ್ತಿದ್ದರು, ಅವರಂತೆ ನಾವು ಆತುರದ ಹೇಳಿಕೆ ನೀಡುವುದಿಲ್ಲ, ಎಷ್ಟು ದಿನ ಒನ್ ಮ್ಯಾನ್ ಶೋ ನಡೆಸುತ್ತಾರೆ ನೋಡೋಣ. ಬೇಕಾದರೆ 100 ದಿನ ಸಮಯ ತೆಗೆದುಕೊಳ್ಳಲಿ ಎಂದರು.

ಅಧಿಕಾರ ಇಲ್ಲದಿದ್ದಾಗ ರೈತರ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದ ಯಡಿಯೂರಪ್ಪ, ಈಗ ಸಿಕ್ಕಿರುವ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ನೋಡಲು ಕಾತುರನಾಗಿದ್ದೇನೆ. ರಾಜ್ಯದ ಜನ ಬುದ್ಧಿವಂತರಿದ್ದಾರೆ, ಪ್ರಜ್ಞಾವಂತರಿದ್ದಾರೆ ಅವರು ಎಲ್ಲವನ್ನು ನೋಡುತ್ತಿದ್ದಾರೆ ಎಂದರು.