ಬೆಂಗಳೂರು(ಜುಲೈ.10) ಕರ್ನಾಟಕದ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಉದ್ದೇಶಪೂರ್ವಕವಾಗಿ ನಮ್ಮ ರಾಜೀನಾಮೆ ಅಂಗೀಕಾರ ಮಾಡುತ್ತಿಲ್ಲ ಎಂಬ ಆರೋಪದಡಿ ಕಾಂಗ್ರೆಸ್-ಜೆಡಿಎಸ್‍ನ 8 ಮಂದಿ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ರಾಜೀನಾಮೆಯನ್ನು ನೀಡಿರುವ 13 ಅತೃಪ್ತ ಶಾಸಕರ ಪೈಕಿ ಐವರ ರಾಜೀನಾಮೆ ಕ್ರಮಬದ್ಧವಾಗಿದೆ ಮತ್ತು ಉಳಿದ 8 ಶಾಸಕರ ರಾಜೀನಾಮೆ ಕ್ರಮಬದ್ದವಾಗಿಲ್ಲ ಎಂದು ಸ್ಪೀಕರ್ ಹೇಳಿರುವ ಹಿನ್ನೆಲೆಯಲ್ಲಿ ಅತೃಪ್ತರು ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಂಜನ್‍ಗೊಗೈ ನೇತೃತ್ವದ ಪೀಠಕ್ಕೆ ಅರ್ಜಿ ಹಾಕಿದ್ದಾರೆ.

ಅತೃಪ್ತರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಇಂದು ಅರ್ಜಿ ಸಲ್ಲಿಸಿ, ಇದು ತುರ್ತು ವಿಚಾರಣಾ ಅರ್ಜಿಯಾಗಿರುವುದರಿಂದ ಕೂಡಲೇ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಆದರೆ ಇಂದು ಅರ್ಜಿ ವಿಚಾರಣೆಗೆ ನಿರಾಕರಿಸಿದ ಪೀಠ ನಾಳೆ ವಿಚಾರಣೆ ಪಟ್ಟಿಯಲ್ಲಿ ಇದನ್ನು ಪರಿಗಣಿಸಬೇಕೆಂದು ರಿಜಿಸ್ಟಾರರ್ ಗೆ ಸೂಚಿಸಿದರು.

ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ಅವರು ಉದ್ದೇಶಪೂರ್ವಕವಾಗಿಯೇ ಶಾಸಕರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದರೂ ಅಂಗೀಕರಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.

ಹೀಗಾಗಿ ಕೂಡಲೇ ನ್ಯಾಯಾಲಯ ಶಾಸಕರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿರುವ ಪತ್ರವನ್ನು ಅಂಗೀಕರಿಸಲು ಸೂಕ್ತ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಆದರೆ ಕ್ರಮಬದ್ಧವಲ್ಲ ಕಾರಣಕ್ಕೆ ರಾಜೀನಾಮೆ ತಿರಸ್ಕರಿಸಿ ಪುನಃ ಕಾನೂನು ಬದ್ಧವಾಗಿ ರಾಜೀನಾಮೆ ಪತ್ರನೀಡುವಂತೆ ಸೂಚಿಸಿದ್ದಾರೆ. ಈ ಮೂಲಕ ಉದ್ದೇಶಪೂರ್ವಕವಾಗಿ ಸ್ಪೀಕರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತದೆ ಎಂದು ಆರೋಪಿಸಲಾಗಿದೆ.