ಹಾವೇರಿ (ಮಾ.9): ಲೋಕಸಭಾ ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿ ಇದ್ದು ಗದ್ದುಗೆ ಏರಲು ಎಲ್ಲಾ ರಾಜಕೀಯ ಪಕ್ಷದ ನಾಯಕರು ಭರ್ಜರಿ ಸಿದ್ದತೆಯನ್ನು ನಡೆಸುತ್ತಿದ್ದಾರೆ.

ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾವೇರಿಯಲ್ಲಿ ನಡೆದ ಸಮಾವೇಷದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಪ್ರಧಾನಿಯಾಗಿ ಆರಿಸಬೇಡಿ ದೇಶದ ಕಾವಲುಗಾರನಾಗಿ ಆರಿಸಿ ಎಂದು ಹೇಳಿಕೊಂಡಿದ್ದ ಮೋದಿ ಈಗ ದೊಡ್ಡ ದೊಡ್ಡ ಕಾರ್ಪೊರೇಟ್ ಕುಳಗಳ ಚೌಕಿದಾರರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಮೋದಿ ಸರ್ಕಾರ ಅಧಿಕಾರದಲ್ಲಿದೆ, ಅಧಿಕಾರಕ್ಕೆ ಬರುವ ಮುನ್ನ ನೀಡಿದ ಉದ್ಯೋಗ ಭರವಸೆ ಸೇರಿದಂತೆ ಒಂದೂ ಭರವಸೆಯನ್ನು ಕೂಡ ಅವರು ಈಡೇರಿಸಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀನಿ ಎಂದು ಭರವಸೆ ನೀಡಿದ್ದಿರಿ. ವಿದೇಶದಲ್ಲಿರುವ ಕಪ್ಪುಹಣ ತರುತ್ತೀನಿ ಎಂದು ಹೇಳಿದ್ದಿರಿ. ಇವೆಲ್ಲಾ ಪೊಳ್ಳು ಭರವಸೆಗಳು ಎಂದು ರಾಹುಲ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಪುಲ್ವಾಮ ದಾಳಿಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂz ಅಜರ್‍ನನ್ನು ಪಾಕಿಸ್ತಾನಕ್ಕೆ ಕರೆದೊಯ್ದು ಬಿಟ್ಟು ಬಂದಿದ್ದು ನೀವೇ ಅಲ್ಲವೇ 1999ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತೀಯ ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ವಿಮಾನದಲ್ಲಿ 155 ಭಾರತೀಯ ಪ್ರಯಾಣಿಕರಿದ್ದರು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಭಾರತದ ಜೈಲಿನಲ್ಲಿದ್ದ ಮಸೂದ್ ಅಜರ್‍ನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವಂತೆ ತಾಲಿಬಾನಿ ಉಗ್ರರು ಷರತ್ತು ವಿಧಿಸಿದ್ದರು. ಆಗಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್, ಮಸೂದ್ ಅಜರ್‍ನನ್ನು ಪಾಕಿಸ್ತಾನಕ್ಕೆ ಖುದ್ದಾಗಿ ತೆರಳಿ ಬಿಟ್ಟು ಬಂದಿದ್ದರು.ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಮಸೂದ್ ಒಟ್ಟಿಗೆ ಕಂದಹಾರ್‍ನಲ್ಲಿರುವ ಪೋಟೋ ಇಂಟರ್‍ನೆಟ್‍ನಲ್ಲಿ ಸಿಗುತ್ತದೆ. ಮಸೂದ್‍ಗೆ ರಕ್ಷಣೆ ಕೊಟ್ಟವರೆ ನೀವು ಎಂದು ಹೇಳಿದ್ದಾರೆ.

ಕೇವಲ 15 ಜನರ ಅಭಿವೃದ್ಧಿ ರಕ್ಷಕರಾಗಿದ್ದಾರೆ. ಇವರು ದೇಶದ ಚೌಕಿದಾರ ಅಥವಾ ಇವರ ಚೌಕಿದಾರ ಎಂಬುದು ತಿಳಿಯುತ್ತಿಲ್ಲ. ಸಿಬಿಐ ನಿರ್ದೇಶಕರನ್ನ ಮಧ್ಯರಾತ್ರಿ ತೆಗೆದುಹಾಕುತ್ತಾರೆ. ಚೀನಾ ಅಧ್ಯಕ್ಷರ ಜೊತೆ ನೀವು ಗುಜರಾತ್?ನಲ್ಲಿ ಉಯ್ಯಾಲೆ ಆಡುವಾಗ, ಚೀನಾ ಸೇನೆ ನಮ್ಮ ಧೋಕ್ಲಾಂ ಗಡಿಗೆ ಬಂದು ಠಿಕಾಣಿ ಹೂಡಿತ್ತು ಅದಕ್ಕೆ ನೀವೇನು ಮಾಡಿದ್ದೀರಾ, ಈಗಲೂ ಚೀನಾದವರು ಅಲ್ಲೇ ಇದ್ದಾರೆ ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಮೋದಿಯಂತೆ ಕಾಂಗ್ರೆಸ್ ಎಂದಿಗೂ ಮಾತು ತಪ್ಪಿಲ್ಲ. ಚುನಾವಣೆಯಲ್ಲಿ ಹೇಳಿದಂತೆ ಮಾಡಿ ತೋರಿಸಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈಗಾಗಲೇ ರೈತರ ಬೆಳೆ ಸಾಲಮನ್ನಾ ಮಾಡಿದೆ. ನಾವು ಅಧಿಕಾರಕ್ಕೆ ಬಂದ ಮೂರು ರಾಜ್ಯಗಳಲ್ಲಿ ಕೂಡ ರೈತರ ಸಾಲಮನ್ನಾ ಮಾಡಿ ಹೇಳಿದಂತೆ ಮಾಡಿ ತೋರಿಸಿದ್ದೇವೆ ಎಂದರು