ಬೆಂಗಳೂರು(ಆ:20): ಫೋನ್ ಕದ್ದಾಲಿಕೆ ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಇತರ ನಾಯಕರು ಯಡಿಯೂರಪ್ಪ ಅವರನ್ನು ಕರೆದು ಸಿಬಿಐ ತನಿಖೆಗೆ ವಹಿಸುವಂತೆ ಸೂಚಿಸಿದ್ದಾರೆ ಎಂಬುದು ಶುದ್ದ ಸುಳ್ಳು ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಿಲುಕಿದ್ದಾರೆ ಎಂದೆಲ್ಲ ಹೇಳುತ್ತಿದ್ದಾರೆ. ಮಾಧ್ಯಮಗಳು ಇದೆನ್ನೆಲ್ಲ ವಿಜೃಂಭಿಸುವ ಅಗತ್ಯ ಇಲ್ಲ ಎನ್ನುವುದು ನನ್ನ ಭಾವನೆ. ಸುಪ್ರೀಂಕೋರ್ಟ್ ಕೂಡ ಒಂದು ಪ್ರಕರಣದಲ್ಲಿ ಫೋನ್ ಕದ್ದಾಲಿಕೆ ತಪ್ಪಲ್ಲ. ಕೆಲವು ವಿಚಾರಗಳಲ್ಲಿ ಕದ್ದಾಲಿಕೆ ಮಾಡಬಹುದು ಎಂದು ತಿಳಿಸಿರುವುದಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಟೆಲಿಫೋನ್ ಕದ್ದಾಲಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವ್ಯಾವ ಸರ್ಕಾರದಲ್ಲಿ ಎಷ್ಟು ಫೋನ್ ಟ್ಯಾಪಿಂಗ್ ಆಗಿದೆ ಅನ್ನೋದನ್ನ ಟಿವಿಗಳಲ್ಲಿ ನೋಡಿದ್ದೇನೆ. ಇಂತಹ ಸ್ಥಿತಿಯಲ್ಲಿ ಈ ವಿಚಾರಕ್ಕೆ ಒತ್ತು ನೀಡುವುದಿಲ್ಲ ಎಂದು ಹೇಳಿದರು.