ಮೈಸೂರು( ಜುಲೈ.11) ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧ ಭಾಗಗಳಲ್ಲಿ ಎಂಟು ಜನರಲ್ಲಿ ಡೆಂಗ್ಯೂ ಇರುವ ಪ್ರಕರಣ ಖಚಿತವಾಗಿದೆ. ಜೂನ್ ತಿಂಗಳಲ್ಲಿ 83 ಜನರಲ್ಲಿ ಡೆಂಗ್ಯೂ ಇರುವ ಶಂಕೆ ವ್ಯಕ್ತವಾಗಿದ್ದು, ಅವರಲ್ಲಿ ಎಂಟು ಜನರಿಗೆ ಡೆಂಗ್ಯೂ ಇರುವುದಾಗಿ ವರದಿಯು ದೃಢಪಡಿಸಿದೆ.

ಪ್ರಸ್ತುತ ವರ್ಷದಲ್ಲಿ ಮೈಸೂರಲ್ಲಿ ಜನವರಿಯಲ್ಲಿ 13ಜನ , ಫೆಬ್ರುವರಿಯಲ್ಲಿ 37ಜನ , ಮಾರ್ಚ್ ನಲ್ಲಿ 19ಜನ , ಏಪ್ರಿಲ್ ನಲ್ಲಿ 16ಜನ, ಮೇ ತಿಂಗಳಲ್ಲಿ 15 ಜನರ ರಕ್ತದ ಸ್ಯಾಂಪಲ್ ಪರೀಕ್ಷಿಸಲಾಗಿತ್ತಾದರೂ, ಯಾರಲ್ಲಿಯೂ ಡೆಂಗ್ಯೂ ಜ್ವರ ಇರಲಿಲ್ಲ. ಆದರೆ ಜೂನ್ ಒಂದೇ ತಿಂಗಳಲ್ಲಿ 83 ಜನರ ರಕ್ತದ ಸ್ಯಾಂಪಲ್ ‍ಗಳನ್ನು ಪರೀಕ್ಷಿಸಲಾಗಿದ್ದು, 8 ಮಂದಿಗೆ ಡೆಂಗ್ಯೂ ಜ್ವರವಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಕಳೆದ ವರ್ಷ 49 ಮಂದಿಯಲ್ಲಿ ಡೆಂಗ್ಯೂ ಇರುವುದು ದೃಢಪಟ್ಟಿತ್ತು.

ರಾಜ್ಯದಲ್ಲಿ 2017ರಲ್ಲಿ 843 ಮಂದಿಗೆ ಡೆಂಗ್ಯೂ ಇರುವುದು ದೃಢಪಟ್ಟಿದ್ದು, ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದರು. 2016ರಲ್ಲಿ 582 ಹಾಗು 2015ರಲ್ಲಿ 382 ಮತ್ತು 2014ರಲ್ಲಿ 66 ಜನರಲ್ಲಿ ಡೆಂಗ್ಯೂ ಪ್ರಕರಣ ದಾಖಲಾಗಿತ್ತು.

ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳು, ಖಾಸಗಿ ಲ್ಯಾಬೊರೇಟರಿಗಳು, ಡಯೋಗ್ನಸ್ಟಿಕ್ ಸೆಂಟರ್ ಗಳಿಗೆ ಬರುವ ರಕ್ತದ ಮಾದರಿಗಳನ್ನು ಪರೀಕ್ಷಿಸಿ, ರೋಗ ಲಕ್ಷಣದ ಮಾಹಿತಿ ನೀಡುವಂತೆ ತಿಳಿಸಲಾಗಿದೆ.