ಬೆಂಗಳೂರು (ಫೆ. 21): ಮೇಕ್ ಇನ್ ಇಂಡಿಯಾಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಮೇಕ್ ಇನ್ ಇಂಡಿಯಾದಲ್ಲಿ ಉತ್ಪಾದಿಸಿದ ಸಾಮಗ್ರಿಗಳ ಖರೀದಿಗೆ ರಕ್ಷಣಾ ಇಲಾಖೆ ಮೊದಲ ಆದ್ಯತೆ ನೀಡುತ್ತದೆ. ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಹೂಡಿಕೆಗಿರುವ ವಿಪುಲ ಅವಕಾಶಗಳನ್ನು ಬಳಸಿಕೊಂಡು ಭಾರತದಲ್ಲಿ ಹೂಡಿಕೆ ಮಾಡಿ, ಇಲ್ಲೆ ಉತ್ಪಾದನೆ ಮಾಡಿ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬೆಂಗಳೂರಿನ ಯಲಹಂಕ ಐಎಎಫ್ ವಾಯುನೆಲೆಯಲ್ಲಿ ಬುಧವಾರದಿಂದ ಆರಂಭವಾದ ಏರೋ ಇಂಡಿಯಾ-2019′ ವೈಮಾನಿಕ ಪ್ರದರ್ಶನಕ್ಕೆ ವಿಧ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು,ಭಾರತದ ರಕ್ಷಣಾ ಹಾಗೂ ವೈಮಾನಿಕ ಕ್ಷೆತ್ರಗಳಲ್ಲಿ ಇರುವ ಅವಕಾಶ ಬಳಸಿಕೊಳ್ಳಲು ದೊಡ್ಡ ಮಟ್ಟದ ಹೂಡಿಕೆ ಮಾಡುವಂತೆ ವಿದೇಶಿ ಕಂಪನಿಗಳಿಗೆ ಆಹ್ವಾನ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಏರೋ ಇಂಡಿಯಾ ದೇಶದ ಹೆಮ್ಮೆಯ ಪ್ರತೀಕ. ಏರೋ ಇಂಡಿಯಾದೊಂದಿಗೆ ಈ ಬಾರಿ ನಾಗರಿಕ ವಿಮಾನಯಾನವೂ ಕೈ ಜೋಡಿಸಿದೆ. ರಕ್ಷಣೆ, ನಾಗರಿಕ, ಸರಕು ಸಾಗಾಣಿಕೆ ವೈಮಾನಿಕ ಕ್ಷೆತ್ರದ ಉತ್ಪಾದನಾ ವಲಯದಲ್ಲಿ ಭಾರತದಲ್ಲಿ ವಿಪುಲ ಅವಕಾಶಗಳಿವೆ ಎಂದು ಹೇಳಿದರು.

ದೇಶಕ್ಕೆ ಜಿಡಿಪಿ ತಂದುಕೊಡುವ ಪ್ರಮುಖ ಕ್ಷೆತ್ರಗಳು ಕೃಷಿ, ಉತ್ಪಾದನೆ, ಸೇವಾ ವಲಯ. ಈ ಮೂರೂ ಕ್ಷೆತ್ರಗಳಲ್ಲೂ ಬೆಂಗಳೂರು ತನ್ನದೇ ಹೆಗ್ಗುರುತು ಮೂಡಿಸಿದೆ. ಇದೇ ದಾರಿಯಲ್ಲಿ ಮೇಕ್ ಇನ್ ಇಂಡಿಯಾ ಮೂಲಕ ದೇಶದಲ್ಲಿ ಉತ್ಪಾದನಾ ಕ್ಷೆತ್ರದಲ್ಲಿ ಹೂಡಿಕೆ ಮಾಡುವವರಿಗೆ ಪ್ರೊತ್ಸಾಹ ನೀಡಲಾಗುವುದು. ಅಲ್ಲದೆ, ಹಿಂದಿನ ಆರ್ಥಿಕ ವರ್ಷದ ಅಕ್ಟೊಬರ್ 2018ರವರೆಗೆ 2,79,950 ಕೋಟಿ ರು. ಮೊತ್ತದ ಉತ್ಪನ್ನಗಳ ಖರೀದಿಗೆ ಮುಂದಾಗಿದ್ದೆವೆ. ಇದರಲ್ಲಿ ಮೇಕ್ ಇನ್ ಇಂಡಿಯಾಗೆ ಪ್ರಮುಖ ಆದ್ಯತೆ ನೀಡಲಾಗುವುದು. ಖಾಸಗಿ ಕಂಪನಿಗಳಿಗೂ ಶೇ.40ರಷ್ಟುಅವಕಾಶ ಕಲ್ಪಿಸಲಾಗುವುದು. ಜತೆಗೆ ವಿದೇಶಿ ಬಂಡವಾಳ ಹೂಡಿಕೆಗೆ ನಿಯಮ ಸಡಿಲಿಕೆ ಮಾಡಿ ಶೇ.100ರಷ್ಟುವಿದೇಶಿ ಬಂಡವಾಳ ನೇರ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಏರೋ ಇಂಡಿಯಾ ಪ್ರದರ್ಶನ ವಿಶ್ವದ ದಿಗ್ಗಜ ರಾಷ್ಟ್ರಗಳೊಂದಿಗೆ ಸರಿಸಮನಾಗಿ ನಿಲ್ಲಲು ಸಹಕಾರಿಯಾಗಿದೆ. ಭಾರತದಲ್ಲಿ ಈವರೆಗೆ ನಾಲ್ಕು ಸಾವಿರ ಏರ್‍ಕ್ರಾಫ್ಟ್‍ಗಳನ್ನು ಉತ್ಪಾದಿಸಿದ್ದೆವೆ. ಇಲ್ಲಿನ ಯುದ್ಧ ವಿಮಾನ, ಹೆಲಿಕಾಪ್ಟರ್‍ಗಳು ವಿದೇಶಗಳಿಗೂ ರಫ್ತಾಗಿವೆ. ಏರೋ ಇಂಡಿಯಾದಲ್ಲಿ 600 ಸ್ವದೇಶಿ ಮತ್ತು 400 ವಿದೇಶಿ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಇದು ರಕ್ಷಣಾ ವಲಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ರಕ್ಷಣಾ ಇಲಾಖೆ ರಾಜ್ಯ ಸಚಿವ ಡಾ.ಸುಭಾಷ್ ರಾಮ್‍ರಾವ್ ಭಮ್ರೆ, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿರೇಂದರ್ ಸಿಂಗ್ ದನೋಯ್, ನೌಕಾಸೇನೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಸೇರಿದಂತೆ ಹಲವರು ಹಾಜರಿದ್ದರು.