ಶಿವಮೊಗ್ಗ(ಜ:09): ಮಾಂಸ ಮಾರಾಟ ಮಾಡುವ ಅಂಗಡಿಯಲ್ಲಿ ಜಿಂಕೆ ಮಾಂಸ ಪತ್ತೆಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಬೈಪಾಸ್ ರಸ್ತೆಯ ನ್ಯೂ ಮಂಡ್ಲಿ ಬಡಾವಣೆಯಲ್ಲಿರುವ ಮಟನ್ ಅಂಗಡಿಯಲ್ಲಿ ಜಿಂಕೆ ಮಾಂಸ ಪತ್ತೆಯಾಗಿದ್ದು,ಈ ಸಂಬಂಧ ಅರಣ್ಯ ಇಲಾಖೆ ಸಂಚಾರ ದಳ ಓರ್ವನನ್ನು ಬಂಧಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಕಣಗಲ್ಕೊಪ್ಪದ ನಿವಾಸಿ ಸಿರಾಜ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆಯ ಸಂಚಾರ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಜಿಂಕೆಯ ತಲೆ,ಕಾಲು ಹಾಗೂ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.

ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಯ ಶೋಧ ಕಾರ್ಯ ಮುಂದುವರೆದಿದ್ದು,ಆರೋಪಿಗಳ ವಿರುದ್ಧ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.