ನವದೆಹಲಿ(ಫೆ:12): ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ಹಾಗೂ ದೆಹಲಿ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಅಮಿತ್ ಭಂಡಾರಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದೆಹಲಿಯ ಸೇಂಟ್ ಸ್ಟೀಫನ್ ಶಾಲೆಯ ಮೈದಾನದಲ್ಲಿ ಈ ಘಟನೆ ನಡೆದಿದ್ದು,ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಹಲ್ಲೆ ನಡೆಯುತ್ತಿರುವ ಸಂದರ್ಭದಲ್ಲಿ ಅವರನ್ನು ರಕ್ಷಿಸಲು ಮುಂದಾದಾಗ ದುಷ್ಕರ್ಮಿಗಳು ಬೆದರಿಸಿದ್ದರಿಂದ ನಾವು ದೂರ ನಿಂತೆವು,ಭಂಡಾರಿ ಅವರು ಓಡಿ ಹೋಗಿದ್ದರಿಂದ ಅವರಿಗೆ ಹೆಚ್ಚು ಗಾಯವಾಗಿಲ್ಲ ಎಂದು ತಂಡದ ಆಟಗಾರನೊಬ್ಬ ತಿಳಿಸಿದ್ದಾನೆ.

ಎರಡನೇ ಪಂದ್ಯ ಆರಂಭವಾಗುವ ವೇಳೆ ಈ ಘಟನೆ ನಡೆದಿದ್ದು,ಹಲ್ಲೆಯಿಂದ ಭಂಡಾರಿ ಅವರ ತಲೆ ಕಿವಿಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಸಂತ ಪರಮಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಕ್ರಿಕೆಟ್ ಅಕಾಡಮಿ ಅಧಿಕಾರಿಗಳು ತಿಳಿಸಿದ್ದಾರೆ, ಈ ಘಟನೆಯ ಬಗ್ಗೆ ದೆಹಲಿ ಕ್ರಿಕೆಟ್ ಅಧ್ಯಕ್ಷ ಪ್ರತಿಕ್ರಿಯಿಸಿದ್ದು,ಈ ಘಟನೆ ಖಂಡನೀಯ,ಹಲ್ಲೆ ನಡೆಸಿರುವವರು ಯಾರು ಎನ್ನುವುದನ್ನು ತನಿಖೆ ನಡೆಸಲಾಗುವುದು,ಈ ವಿಚಾರವಾಗಿ ಈಗಾಗಲೇ ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ನಡೆಸಲಾಗಿದೆ,ಯಾವ ಕಾರಣಕ್ಕೂ ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.