ಬೆಂಗಳೂರು(ಫೆ.14): ಬಿಜೆಪಿ ಶಾಸಕ ಪ್ರೀತಂ ಗೌಡ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಆಡಿಯೋ ಬಿಡುಗಡೆಯಾಗಿತ್ತು. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಬೆನ್ನಲ್ಲೇ ಬಿಜೆಪಿಯವರು ಹಳೆಯ ವಿಡಿಯೋವೋಂದನ್ನು ಬಿಡುಗಡೆ ಮಾಡುವ ಮೂಲಕ ದೋಸ್ತಿ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

ಪ್ರತಿ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರು ಹಾಕುತ್ತಾರೆ. ಒಂದು ವೇಳೆ ಜೆಡಿಎಸ್‍ನನ್ನು ಗೆಲ್ಲಿಸದಿದ್ದರೇ ವಿಷ ಕುಡಿಯುತ್ತೇನೆ ಎಂದು ಹೇಳುತ್ತಾರೆ. ಹೀಗಾಗಿ ದೇವೆಗೌಡರು ಯಾವಾಗ ವಿಷ ಕುಡಿಯುತ್ತಾರೆ ಎಂದು ಕಾಯುತ್ತಿದ್ದೇನೆ ಎಂದು ಡಿಸಿಎಂ ಪರಮೇಶ್ವರ್ ಈ ಹಿಂದೆ ಹೇಳಿಕೆ ನೀಡಿದ್ದ ವಿಡಿಯೋ ಈಗ ವೈರಲ್ ಆಗಿದೆ.

ಕರ್ನಾಟಕ ಬಿಜೆಪಿ ತನ್ನ ಖಾತೆಯಿಂದ ಈ ವಿಡಿಯೋವನ್ನು ಹರಿಬಿಟ್ಟಿದ್ದು, ಪರಮೇಶ್ವರ್ ದೇವೆಗೌಡರು ವಿಷ ಕುಡಿಯುವುದನ್ನು ಕಾಯುತ್ತಿದ್ದರಂತೆ ಎಂದು ಕುಟುಕಿದ್ದಾರೆ.

ದೇವೇಗೌಡರು ವಿಷ ಸೇವಿಸುವುದನ್ನು ಕಾಯುತ್ತಿದ್ದರಂತೆ ಡಿ.ಸಿ.ಎಂ ಪರಮೇಶ್ವರ್. ಅವರ ಮನೆಯ ಮೇಲೂ ಕಲ್ಲು ತೂರುತ್ತಾರಾ ಜೆ.ಡಿ.ಎಸ್ ನ ಸ್ವಾಭಿಮಾನಿ ಕಾರ್ಯಕರ್ತರು ಎಂದು ಪ್ರಶ್ನಿಸಿದ್ದಾರೆ.

2014ರಲ್ಲಿ ಶಿವಾಜಿನಗರ ಕಾಂಗ್ರೆಸ್ ಕಚೇರಿ ಬಳಿ ನಡೆದ ಪ್ರಚಾರ ಸಭೆಯೊಂದರಲ್ಲಿ ಡಿಸಿಎಂ ಪರಮೇಶ್ವರ್ ಹೀಗೆ ಹೇಳಿಕೆ ನೀಡಿದ್ದರು. ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣ ಸಮ್ಮುಖದಲ್ಲೇ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ್ದ ಪರಮೇಶ್ವರ್ ದೇವೆಗೌಡರ ವಿರುದ್ಧ ಕಿಡಿಕಾರಿದ್ದರು.