ದಾವಣಗೆರೆ(ಆ:23): ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ದಾವಣಗೆರೆ ಗಾಜಿನ ಮನೆಯಲ್ಲಿ ಇಂದಿನಿಂದ 27ರವರೆಗೆ ಐದು ದಿನಗಳ ಕಾಲ ಪುಷ್ಪ ಮೇಳವನ್ನು ಆಯೋಜಿಸಲಾಗಿದೆ.

ನಗರದ ಗಾಜಿನ ಮನೆಯಲ್ಲಿ ಬೆಂಗಳೂರು ಲಾಲ್ ಬಾಗ್ ಮಾದರಿಯಲ್ಲಿ ಪುಷ್ಪ ಮೇಳ ಆಯೋಜಿಸಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮೀಕಾಂತ್, “ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇದೇ 23ರಿಂದ 27ರವರೆಗೆ ಐದು ದಿನಗಳ ಕಾಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಸ್ವಾತಂತ್ರ ದಿನಾಚರಣೆಯಂದೇ ಪ್ರದರ್ಶನ ಉದ್ಘಾಟಿಸಬೇಕಿತ್ತು. ಮಳೆಯಿಂದಾಗಿ ಪ್ರದರ್ಶನ ಮುಂದೂಡಲಾಯಿತು” ಎಂದು ತಿಳಿಸಿದರು.

ಈ ಬಾರಿ ಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಹೂವಿನಲ್ಲಿ ಪ್ಯಾರಿಸ್ ನ ಐಫೆಲ್ ಟವರ್ ಮಾದರಿ ಮಾಡಲಾಗಿದ್ದು,30 ಅಡಿ ಎತ್ತರ ಹಾಗೂ 23 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ 80,000ಕ್ಕೂ ಹೆಚ್ಚು ಗುಲಾಬಿ ಹೂವುಗಳಿಂದ ವಿನ್ಯಾಸಗೊಳಿಸಲಾಗಿದೆ.