ಬೆಂಗಳೂರು(ಜೂ:11): ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ನಡುವೆ ಎಷ್ಟೇ ಒಳಜಗಳಗಳು ತಾರಕಕ್ಕೇರಿದ್ದರೂ ಶುಕ್ರವಾರ ಸಂಪುಟ ವಿಸ್ತರಣೆಗೆ ನಿರ್ಧರಿಸಲಾಗಿದೆ. ಕಾಂಗ್ರೆಸ್ ಅತೃಪ್ತ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮೈತ್ರಿ ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದ ಬಿಜೆಪಿ ಕೂಡ ಹಿಂದೆ ಸರಿದಿದೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿದೆ. ಒಂದು ವೇಳೆ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದರೆ ಬಿಜೆಪಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಲಾಗುತ್ತಿದೆ.

ಆದರೆ ನಿಜಾಂಶವೇ ಬೇರೆ, ಕಾಂಗ್ರೆಸ್- ಜೆಡಿಎಸ್ ಮಾತ್ರವಲ್ಲ, ಬಿಜೆಪಿಗೂ ಕೂಡ ಮಧ್ಯಂತರ ಚುನಾವಣೆ ಬೇಕಿಲ್ಲ. ಕಾರಣ ಹಣಕಾಸು ಪರಿಸ್ಥಿತಿ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಸುಮಾರು 170 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲ್ಲಬಹುದೆಂದು ಬಿಜೆಪಿ ಲೆಕ್ಕಾಚಾರ ಹಾಕಿತ್ತು. ಆದರೆ, ಲೋಕಸಭೆ ಚುನಾವಣೆ ನಂತರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ವ್ಯತಿರಿಕ್ತವಾಗಿ ಬಂದಿರುವ ಕಾರಣದಿಂದಾಗಿ ಮತ್ತೆ ವಿಧಾನಸಭೆ ಚುನಾವಣೆಗೆ ಹೋಗುವುದು ಎಷ್ಟು ಸರಿ ಎಂಬ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ಆಂತರಿಕ ಕಚ್ಚಾಟದ ಕಾರಣ ಸದ್ಯಕ್ಕೆ ಸರ್ಕಾರ ಉರುಳಿಸುವ ಪ್ರಯತ್ನ ಬೇಡ ಎಂದು ಹೈಕಮಾಂಡ್ ಸೂಚಿಸಿದೆ. ಇನ್ನು ಲೋಕಸಭೆ ಚುನಾವಣೆಯಲ್ಲಿ ಘಟಾನುಘಟಿ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಲ್ಲಿಕಾರ್ಜುನ ಖರ್ಗೆಯಂಥವರೇ ಸೋತಿದ್ದಾರೆ. ಹೀಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಅನುಕಂಪದ ಅಲೆ ಲಾಭವಾಗುತ್ತದೆ ಎಂಬುದನ್ನು ಅರಿತಿರುವ ಬಿಜೆಪಿ, ಆಪರೇಷನ್ ಕಮಲದಿಂದ ಹಿಂದೆ ಸರಿಯಲು ನಿರ್ಧರಿಸಿದೆ.