ಬೆಂಗಳೂರು(ಜುಲೈ.15) ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ರೂವಾರಿ, ಆರೋಪಿ ಮನ್ಸೂರ್ ಖಾನ್, ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೊ ಹರಿಬಿಟ್ಟಿದ್ದು, 24 ಗಂಟೆಯೊಳಗೆ ಭಾರತಕ್ಕೆ ವಾಪಸ್ಸಾಗುತ್ತೇನೆ ಎಂದು ಹೇಳಿದ್ದಾರೆ.

ನಾನು ಭಾರತ ಬಿಟ್ಟು ಹೋಗಿದ್ದು ದೊಡ್ಡ ತಪ್ಪು. ನಾನು ರಾಜಕಾರಣಿಗಳ ಒತ್ತಡದಿಂದ ಭಾರತ ಬಿಡಬೇಕಾಗಿತು. ಈಗಲೂ ನನಗೆ ನನ್ನ ಕುಟುಂಬದವರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ ಅಳಲು ತೋಡಿಕೊಂಡಿದ್ದಾರೆ. ಭಾರತಕ್ಕೆ ಬಂದು ಎಲ್ಲಾ ಜನರ ಹಣವನ್ನು ವಾಪಾಸ್ ನೀಡುತ್ತೇನೆ. ಕಾನೂನು ತನಿಖೆಗೆ ಸಹಕಾರ ನೀಡುವಂತೆ ಕೇಳಿಕೊಂಡಿದ್ದಾನೆ.

ಐಎಂಎ ಪ್ರಕರಣದ ತನಿಖೆಗೆ ಬೇಕಾಗುವ ಎಲ್ಲಾ ದಾಖಲೆಗಳನ್ನು ನಾನು ಅಧಿಕಾರಿಗಳಿಗೆ ಕೊಡುತ್ತೇನೆ. ಹಣ ಮರಳಿಸಲು ನಾನು ಬೆಂಗಳೂರಿಗೆ ಬರುತ್ತಿದ್ದು, ನಾನು ಬಂದಾಗ ನಾನು ಕೊಟ್ಟಿರುವ ಹಣ ಪಡೆಯಲು ನನಗೆ ಪೊಲೀಸರು ಸಹಾಯ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ನನಗೆ ಭಾರತದ ನ್ಯಾಯಾಂಗದ ಮೇಲೆ ಭರವಸೆಯಿದೆ. ನಮ್ಮ ಆಸ್ತಿಗಳನ್ನು ಲಿಕ್ವಿಡೇಟ್ ಮಾಡಿ ಅದರ ಮೂಲಕ ಹಣ ತಲುಪಿಸುತ್ತೇವೆ. ಹಣ ನೀಡಬೇಕಾದವರು ಯಾರು ಎಂಬ ಬಗ್ಗೆ ಕೆಲ ಮಂದಿಯ ಲಿಸ್ಟ್ ಮಾಡಿದ್ದೇನೆ. ಅವರಿಂದ ಹಣ ಪಡೆದುಕೊಳ್ಳಬಹುದು. ನ್ಯಾಯಾಂಗದ ಸಹಾಯದಿಂದಲೇ ಅವರ ಮೂಲಕ ಹಣ ಪಡೆದು ಸಂಬಂಧಪಟ್ಟವರಿಗೆ ತಲುಪಿಸುತ್ತೇವೆ ಎಂದು ಹೇಳಿದ್ದಾನೆ.