ಬೆಂಗಳೂರು(ಆ:12): ರಾಜ್ಯದಲ್ಲಿನ ಉದ್ಯೋಗ ಅನ್ಯರ ಪಾಲಾಗಿ ಕನ್ನಡಿಗರು ನಿರುದ್ಯೋಗಿಗಳಾಗಬಾರದು ಎಂಬ ಉದ್ದೇಶದಿಂದ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಕಳೆದ ಗುರುವಾರದಿಂದ ಪತ್ರಿಕೆಯು ಆರಂಭಿಸಿರುವ ‘ಕನ್ನಡಪ್ರಭ ಹಕ್ಕೊತ್ತಾಯ’ ಹೆಸರಿನ ವಿಶೇಷ ಸರಣಿಯ ಆಶಯಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪೂರಕವಾಗಿ ಸ್ಪಂದಿಸಿದ್ದಾರೆ.

ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು ಎಂಬ ಒತ್ತಾಯಕ್ಕೆ ಪೂರಕವಾಗಿ ಯಡಿಯೂರಪ್ಪ, ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗಬೇಕು ಎಂಬುದೇ ನಮ್ಮ ಸರ್ಕಾರದ ಆಶಯ. ಸರ್ಕಾರದ ನೀತಿಯೂ ಸಹಾ ಈ ನಿಟ್ಟಿನಲ್ಲಿದೆ. ಈ ನೆಲದ ಭಾವನೆಗಳನ್ನು ನಾವು ಸದಾ ಗೌರವಿಸುತ್ತೇವೆ. ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿರುವ ಅವರು ನಮ್ಮ ರಾಜ್ಯದ ಸಂಸ್ಕೃತಿ ಹಾಗೂ ಭಾಷೆಯ ಹಕ್ಕುಗಳ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿರುತ್ತದೆ. ಕನ್ನಡಿಗರ ಬದುಕುವ ಹಾಗೂ ಉದ್ಯೋಗ ಮಾಡುವ ಹಕ್ಕುಗಳನ್ನು ಸಂರಕ್ಷಣೆ ಮಾಡುತ್ತೇವೆ. ಸರ್ಕಾರದ ನಿಯಮಗಳು ಕನ್ನಡಿಗರ ಉದ್ಯೋಗ ಹಾಗೂ ಇತರೆ ಹಕ್ಕುಗಳ ರಕ್ಷಿಸಲು ಬದ್ಧವಾಗಿರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.