ಬೆಂಗಳೂರು(ಜುಲೈ.15) ಇಂದು ಮೈತ್ರಿ ಸರ್ಕಾರ ವಿಶ್ವಾಸ ಮತಯಾಚನೆ ಸಾಬೀತು ಪಡಿಸಬೇಕು ಎಂದು ವಿಧಾನಸಭಾ ಬಿಜೆಪಿ ಪಟ್ಟು ಹಿಡಿದಿತ್ತು. ಇದಕ್ಕಾಗಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಬಿಜೆಪಿ ನಿಯೋಗ ಭೇಟಿ ಮಾಡಿ ಮನವಿ ಮಾಡಿತ್ತು. ಆದರೇ ಈ ಎಲ್ಲಾ ಬೆಳವಣಿಗೆ ನಡುವೆ ಸಿಎಂ ಕುಮಾರಸ್ವಾಮಿಯವರು ವಿಶ್ವಾಸ ಮತಯಾಚನೆಯನ್ನು ಗುರುವಾರದಂದು ಮಾಡುವುದಾಗಿ ತಿಳಿಸಿದ್ದಾರೆ.

ವಿಶ್ವಾಸ ಮತಯಾಚನೆಯ ದಿನಾಂಕ , ಸಮಯ ನಿಗದಿ ವಿಷಯವಾಗಿ ವಾದ-ವಿವಾದಗಳು ತಾರಕಕ್ಕೇರಿದ್ದರಿಂದ ಇಂದು ಮಧ್ಯಾಹ್ನ ಭೋಜನ ವಿರಾಮದವರೆಗೂ ವಿಧಾನಸಭೆ ಕಲಾಪ ಆರಂಭಗೊಳ್ಳಲೇ ಇಲ್ಲ. ಸ್ಪೀಕರ್ ರಮೇಶ್‍ಕುಮಾರ್ ನೇತೃತ್ವದಲ್ಲಿ ವಿಧಾನಮಂಡಲ ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ನಡೆಸಲಾಯಿತು. ನಂತರದಲ್ಲಿ ಸಿಎಂ ಕುಮಾರಸ್ವಾಮಿಯವರು ವಿಶ್ವಾಸ ಮತಯಾಚನೆಯನ್ನು ಎರಡು ದಿನಗಳ ನಂತರ ಗುರುವಾರ ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ , ಸಚಿವರಾದ ಕೃಷ್ಣಭೈರೇಗೌಡ, ಕೆ.ಜೆ.ಜಾರ್ಜ್, ಕಾಂಗ್ರೆಸ್‍ನ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ, ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್, ಸುನೀಲ್‍ಕುಮಾರ್, ಗೋವಿಂದ ಕಾರಜೋಳ, ಇತರರು ಭಾಗಿಯಾಗಿದ್ದರು.