ಬೆಂಗಳೂರು(ಜುಲೈ.12) ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಲವಾದ ಆತ್ಮವಿಶ್ವಾಸದೊಂದಿಗೆ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಮುಂದಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಮತಯಾಚನೆಗೆ ಮುಂದಾದ ತಕ್ಷಣವೇ ಬಿಜೆಪಿ ಪಕ್ಷದಲ್ಲಿ ಆತಂಕ ಸೃಷ್ಟಿಯಾಗಿದೆ.

ಈಗಾಗಲೇ ಆಪರೇಷನ್ ಕಮಲ ನಡೆಸಿ 14 ಮಂದಿ ಕಾಂಗ್ರೆಸ್-ಜೆಡಿಎಸ್ ಶಾಸಕರಿಂದ ರಾಜೀನಾಮೆ ಕೊಡಿಸಿರುವ ಬಿಜೆಪಿ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಮತ್ತು ಸರ್ಕಾರವನ್ನು ರಚಿಸುವ ಆತ್ಮವಿಶ್ವಾಸದಲ್ಲಿದೆ.

ಇದಕ್ಕೆ ಪೂರಕವಾಗಿ ಕಾಂಗ್ರೆಸ್ ನ ರೋಷನ್‍ಬೇಗ್ ಮತ್ತು ರಾಮಲಿಂಗಾರೆಡ್ಡಿಯವರೂ ಕೂಡ ರಾಜೀನಾಮೆ ನೀಡಿರುವುದು ಬಿಜೆಪಿ ಪಕ್ಷಕ್ಕೆ ವರದಾನವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಅತಿಯಾದ ಆತ್ಮವಿಶ್ವಾಸದಲ್ಲಿದ್ದು, 6ನೇ ಬಾರಿ ಕಾರ್ಯಾಚರಣೆ ಮಾಡುತ್ತಿರುವ ಆಪರೇಷನ್ ಕಮಲ ಯಶಸ್ವಿಯಾಗಲಿದೆ ಎಂಬ ನಿರೀಕ್ಷೆಯಲ್ಲಿದೆ.
ಶಾಸಕರ ಸಂಖ್ಯಾಬಲದ ಕೊರತೆ ಮೇಲ್ನೋಟಕ್ಕೆ ಕಂಡು ಬಂದರೂ ಕುಮಾರಸ್ವಾಮಿಯವರು ವಿಶ್ವಾಸಮತಯಾಚನೆಗೆ ಮುಂದಾಗಿರುವುದು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಿವರ್ಸ್ ಆಪರೇಷನ್ ಕಾರ್ಯಾಚರಣೆ ಈಗಾಗಲೇ ನಡೆದಿದ್ದು, ವಿಶ್ವಾಸ ಮತಯಾಚನೆಗೆ ಸಮಯ ಸಿಕ್ಕರೆ ಬಿಜೆಪಿ ಕೆಲ ಶಾಸಕರು ಸದನಕ್ಕೆ ಗೈರು ಹಾಜರಾಗಲಿದ್ದಾರೆ ಎಂಬ ಮಾಹಿತಿ ಇದೆ. ರಿವರ್ಸ್ ಆಪರೇಷನ್ ಯಶಸ್ವಿಯಾಘಿರುವುದರಿಂದಲೇ ಕುಮಾರಸ್ವಾಮಿಯವರು ಆತ್ಮವಿಶ್ವಾಸದಿಂದ ಧೈರ್ಯದಿಂದ ವಿಶ್ವಾಸ ಮತಯಾಚನೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ರಿವರ್ಸ್ ಆಪರೇಷನ್‍ಗೆ ಸಿಲುಕಿರುವ ಶಾಸಕರ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಲಾಗಿದೆ.

ವಿಶ್ವಾಸಮತಯಾಚನೆ ದಿನ ಅನಿರೀಕ್ಷಿತವಾಗಿ ಕೆಲವು ಬೆಳವಣಿಗೆಗಳು ನಡೆಯಲಿದೆ. ಕುಮಾರಸ್ವಾಮಿ ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲುತ್ತಾರೆ. ಆರನೇ ಬಾರಿಯೂ ಆಪರೇಷನ್ ಕಮಲ ವಿಫಲವಾಗಲಿದೆ. ರಾಜೀನಾಮೆ ಕೊಟ್ಟು, ಪಕ್ಷ ದ್ರೋಹ ಮಾಡಿ ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜಕೀಯ ಭವಿಷ್ಯ ತ್ರಿಶಂಕು ಸ್ಥಿತಿಯಂತಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಸಿಎಂ ಕುಮಾರಸ್ವಾಮಿಯವರ ಕೈ ಮೇಲಾಗುವುದೋ, ಇಲ್ಲ ಯಡಿಯೂರಪ್ಪ ಯಶಸ್ವಿಯಾಗುವರೋ ಎಂಬ ಚರ್ಚೆಗಳು ಬಿರುಸಿನಿಂದ ನಡೆದಿವೆ. ಸ್ಪೀಕರ್ ರಮೇಶ್‍ಕುಮಾರ್ ಅವರು ವಿಶ್ವಾಸ ಮತಯಾಚನೆಗೆ ಯಾವ ದಿನ ನಿಗದಿ ಮಾಡುತ್ತಾರೆ ಎಂಬುದು ಕೂಡ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ.